ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಮಾಹಿತಿ ಚಂದನವನದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ನಾಳೆ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಅದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಈಗಾಗಲೇ ಬ್ಯಾಂಕಾಕ್ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರಿಪೋರ್ಟ್ ಬಂದ ತಕ್ಷಣವೇ ಮಾಧ್ಯಮಕ್ಕೆ ಕೊಡುತ್ತೇವೆ ಎಂದು ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ಬಳಿಕ ಘಟನೆಯ ಬಗ್ಗೆ ವಿವರಿಸಿದ ಅವರು, "ಸ್ಪಂದನಾ ಕಸಿನ್ಸ್ ಜೊತೆ ಬ್ಯಾಂಕಾಕ್ಗೆ ತೆರಳಿದ್ದರು. ಅಲ್ಲಿ ವಿಜಯ ರಾಘವೇಂದ್ರ ಅವರಿಗೆ ಶೂಟಿಂಗ್ ಇತ್ತು. ಅದನ್ನು ಮುಗಿಸಿಕೊಂಡ ವಿಜಯ್ ನಂತರ ಸ್ಪಂದನಾ ಅವರೊಂದಿಗೆ ಸೇರಿಕೊಂಡಿದ್ದಾರೆ. ರಾತ್ರಿ ವೇಳೆ ಈ ಘಟನೆ ನಡೆದಿದೆ. ನಮಗೆ ವಿಚಾರ ಭಾನುವಾರ ರಾತ್ರಿಯೇ ಗೊತ್ತಾಗಿದೆ. ಸ್ಪಂದನಾ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ ಬಳಿಕ ನಿಮಗೆ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಯಾವುದೇ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ" ಎಂದು ಇದೇ ವೇಳೆ ಮನವಿ ಮಾಡಿಕೊಂಡರು.
"ಸ್ಪಂದನಾ ತುಂಬಾ ವೀಕ್ ಇದ್ದಳು. ಡಯೆಟ್, ಜಿಮ್ ಅಂತೇನು ಹೋಗ್ತಾ ಇರಲಿಲ್ಲ. ಅದೆಲ್ಲವೂ ಕೇವಲ ರೂಮರ್ಸ್ ಮಾತ್ರ. ಇಂತಹ ಸುದ್ದಿಗಳನ್ನು ಯಾರೂ ಕೂಡ ಎಲ್ಲಿಯೂ ಹಬ್ಬಿಸಬೇಡಿ. ಆಕೆ ಒಬ್ಬಳು ಹೆಣ್ಣು ಮಗಳು. ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಜೀವನವಿದೆ. ಹೃದಯಾಘಾತ ಆಗಿರುವುದಂತು ನಿಜ. ನಾಳೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವ ವ್ಯವಸ್ಥೆ ಆಗುತ್ತಿದೆ" ಎಂದು ತಿಳಿಸಿದರು.
ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡುತ್ತಿರುವುದು ಸಾ.ರಾ ಗೋವಿಂದು ಭಾವುಕ: ವಿಜಯ ರಾಘವೇಂದ್ರ ಕುಟುಂಬದ ಜೊತೆ ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಇದೀಗ ಸ್ಪಂದನಾ ನಿಧನ ಅವರಿಗೆ ಆಘಾತ ಉಂಟು ಮಾಡಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಈಗಾಗಲೇ ಹರಿಪ್ರಸಾದ್ ಹೇಳಿರುವಂತೆ ಸ್ಪಂದನಾ ಪೋಸ್ಟ್ ಮಾರ್ಟಂ ರಿಪೋರ್ಟ್ ಬರುವವರೆಗೂ ಅವರ ಬಗ್ಗೆ ಯಾವುದೇ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ" ಎಂದು ಹೇಳಿದರು.
"ಆ ಭಗವಂತನಿಗೆ ಇತ್ತೀಚೆಗೆ ಬಹಳ ಚಿಕ್ಕ ವಯಸ್ಸಿನವರನ್ನು, ಅದರಲ್ಲೂ ತುಂಬಾ ಒಳ್ಳೆಯವರನ್ನು ಕಂಡರೆ ಹೆಚ್ಚು ಪ್ರೀತಿ ಅನಿಸುತ್ತೆ. ಸ್ಪಂದನಾ ಸಣ್ಣವಳಿದ್ದಾಗಿನಿಂದ ಆಕೆಯನ್ನು ನೋಡುತ್ತಿದ್ದೇನೆ. ವಿಜಯ್ ರಾಘವೇಂದ್ರ ನಮ್ಮೂರಿನಲ್ಲಿ ಹುಟ್ಟಿ ಬೆಳೆದ ಮಗ. ಕಳೆದ 29 ವರ್ಷಗಳ ಹಿಂದಿನ ನೆನಪು ನನಗಿಂದು ಆಗುತ್ತಿದೆ. ಇಂದು ವಿಜಯ್ ಅನುಭವಿಸುತ್ತಿರುವ ನೋವನ್ನು 29 ವರ್ಷಗಳ ಹಿಂದೆ ನಾನು ಅನುಭವಿಸಿದ್ದೇನೆ. ಯಾರು ಆ ನೋವನ್ನು ಅನುಭವಿಸಿರುತ್ತಾರೋ, ಅವರಿಗೆ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ" ಎಂದರು.
"ಇವತ್ತು ನಮ್ಮ ಕಣ್ಮುಂದೆ ಬೆಳೆದ ಹುಡುಗ ಶ್ರೀಮತಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಒಬ್ಬ ದಕ್ಷ ಅಧಿಕಾರಿ ಸ್ಪಂದನಾ ತಂದೆ ಬಿ.ಕೆ ಶಿವರಾಮ್. 40 ವರ್ಷದಿಂದ ನಾನು ಅವರನ್ನು ನೋಡಿಕೊಂಡು ಬಂದಿದ್ದೇನೆ. ಅವರ ಮನೆಗೆ ವಾರಕ್ಕೆ ಎರಡು ಬಾರಿ ಬರುತ್ತಿದ್ದೆ. ಆಗ ಸ್ಪಂದನಾ ಇಲ್ಲೆಲ್ಲಾ ಓಡಾಡುತ್ತಿದ್ದಳು. ಇವತ್ತು ಅವಳು ನಮ್ಮ ಕಣ್ಮುಂದೆ ಇಲ್ಲ" ಎಂದು ಭಾವುಕರಾದರು.
ಇದನ್ನೂ ಓದಿ:'ಸ್ಪಂದನಾ ಇಲ್ಲದೇ ವಿಜಯ್ ಬದುಕಲ್ಲ ಎಂದಿದ್ದು ಕೇಳಿ ಕರುಳು ಹಿಂಡಿದಂತಾಯಿತು': ಹಿರಿಯ ನಟಿ ಜಯಮಾಲಾ ಭಾವುಕ