ಶ್ರೀರಂಗಪಟ್ಟಣ (ಮಂಡ್ಯ):ಚಲನಚಿತ್ರ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಸಂಸ್ಕಾರ ಆಗಸ್ಟ್ 9ರಂದು ಬೆಂಗಳೂರಿನಲ್ಲಿ ನಡೆದಿತ್ತು. ಇಂದು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗಿದೆ. ದೋಷ ನಿವಾರಣೆಗಾಗಿ ನಡೆದ ಹೋಮ-ಹವನ ವಿಧಿವಿಧಾನದಲ್ಲಿ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಸ್ಪಂದನಾ ವಿಜಯ್ ರಾಘವೇಂದ್ರ ಅವರು ಇತ್ತೀಚೆಗೆ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದರು. ಆ ಸಮಯದಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮೃತದೇಹವನ್ನು ಬೆಂಗಳೂರಿಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇಂದು ಅಸ್ಥಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಲು ವಿಜಯ್ ರಾಘವೇಂದ್ರ ಅವರು ಕುಟುಂಬಸಮೇತರಾಗಿ ಆಗಮಿಸಿದ್ದರು.
ವಿಜಯ್ ರಾಘವೇಂದ್ರ, ಪುತ್ರ ಶೌರ್ಯ, ಸಹೋದರ ಶ್ರೀಮುರುಳಿ, ಚಿನ್ನೇಗೌಡ, ಸ್ಪಂದನಾರ ತಂದೆ ಬಿ.ಕೆ.ಶಿವರಾಂ ಸೇರಿದಂತೆ ಕುಟುಂಬಸ್ಥರು ಇದ್ದರು. ಪುತ್ರ ಶೌರ್ಯ ಅವರಿಗೆ ಪೂಜೆಗೂ ಮುನ್ನ ಕೇಶ ಮುಂಡನ ಮಾಡಿಸಲಾಯಿತು. ವಿಜಯ್ ರಾಘವೇಂದ್ರ ಅವರು ಪಿಂಡ ಪ್ರದಾನ, ನಕ್ಷತ್ರ ಹೋಮ ಸೇರಿದಂತೆ ಶ್ರಾದ್ಧಾ ವಿಧಿ-ವಿಧಾನ ನೆರವೇರಿಸಿದ ಬಳಿಕ ಅಸ್ಥಿ ವಿಸರ್ಜಿಸಿದರು.