ಕಂಚಿನ ಕಂಠದ ಗಾನ ಗಂಧರ್ವ, ಭಾರತೀಯ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ. 16 ಭಾಷೆ ಮತ್ತು 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ. ತಮ್ಮ ಕಂಠದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಎಸ್ಪಿಬಿ ನಮ್ಮನ್ನಗಲಿ ಸೋಮವಾರ (ಸೆ. 25, 2023)ಕ್ಕೆ 3 ವರ್ಷ. 2020ರ ಸೆಪ್ಟೆಂಬರ್ 25 ರಂದು ಮಹಾನ್ ಹಾಡುಗಾರ ಎಸ್ ಪಿ ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ ದಿನ.
ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕ ನಟರಿಗೆ ಧ್ವನಿಯಾಗಿ, ನಟರಾಗಿ, ನಿರ್ಮಾಪಕರಾಗಿ ಎಸ್ಪಿಬಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾ ಅಭಿರುಚಿ ಹೊಂದಿದ್ದ ಬಾಲಸುಬ್ರಹ್ಮಣ್ಯಂ ಕರ್ನಾಟಕದ ಜೊತೆ ಒಂದು ಅವಿಸ್ಮರಣೀಯ ಬಾಂಧವ್ಯ ಹೊಂದಿದ್ದರು.
ಎಸ್ಪಿಬಿ ಮೂರನೇ ವರ್ಷದ ಪುಣ್ಯಸ್ಮರಣೆ: ಕರ್ನಾಟಕದ ಜೊತೆ ಗಾನ ಗಂಧರ್ವನ ನಂಟು ಹೀಗಿತ್ತು.. ಎಸ್ಪಿಬಿ ಗಾಯಕರಾಗಿದ್ದು ಹೀಗೆ..ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ 1946ರ ಜೂನ್ 4ರಂದು ಜನಿಸಿದ್ದ ಇವರು, ಗಾಯಕನಾಗಿದ್ದು ಮಾತ್ರ ಇಂಟ್ರಸ್ಟ್ರಿಂಗ್. ಹರಿಕಥೆ ಕುಟುಂಬದಲ್ಲಿ ಹುಟ್ಟಿದ ಎಸ್ಪಿಬಿ ಅವರಿಗೆ ಗಾಯಕನಾಗುವುದಕ್ಕೆ ತಂದೆ ಎಸ್ ಪಿ ಸಾಂಬಮೂರ್ತಿಯವರೇ ಸ್ಫೂರ್ತಿ. ಯಾವುದೇ ಗಾಯನದ ಗಂಧ ಗಾಳಿ ಗೊತ್ತಿಲ್ಲದ ಬಾಲಸುಬ್ರಹ್ಮಣ್ಯಂ ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತ ಸಂಗೀತದ ಪರ್ವತ ಆಗಿದ್ದು ರೋಚಕ.
1967ರಲ್ಲಿ ಬಂದ 'ನಕ್ಕರೇ ಅದೇ ಸ್ವರ್ಗ' ಸಿನಿಮಾ ಮೂಲಕ, ಹಿನ್ನೆಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಪಾದಾರ್ಪಣೆ ಮಾಡಿದರು. ಜಯಂತಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ, ಸಂಗೀತ ನಿರ್ದೇಶಕ ಎಂ ರಂಗರಾವ್ ಅವರು ಎಸ್ಪಿಬಿ ಕಂಠ ಸಿರಿಯಲ್ಲಿ ಕನಸಿದೋ ನನಸಿದೋ ಎಂಬ ಹಾಡನ್ನು ಹಾಡಿಸುತ್ತಾರೆ. ಅಲ್ಲಿಂದ ಅವರ ಸಂಗೀತ ಸುಧೆ ಶುರುವಾಗುತ್ತೆ.
ಕನ್ನಡ ಚಿತ್ರರಂಗದಲ್ಲಿ ಪಿ ಬಿ ಶ್ರೀನಿವಾಸ್ ಸಂಗೀತದ ಸಾರ್ವಭೌಮರಾಗಿ ಮುಂಚೂಣಿಯಲ್ಲಿ ಇದ್ದರು. ಆ ಸಮಯದಲ್ಲಿ ಬಾಲಸುಬ್ರಹ್ಮಣ್ಯಂ ಕನ್ನಡ ಮಾತನಾಡಲು ಬಾರದೇ ಇದ್ದರೂ ಕನ್ನಡದಲ್ಲೇ ಹಾಡೋದಿಕ್ಕೆ ಶುರು ಮಾಡುತ್ತಾರೆ. ಡಾ. ರಾಜ್ಕುಮಾರ್ ಸಿನಿಮಾಗಳಿಗೆ ಫುಲ್ ಟೈಮ್ ಗಾಯಕರಾಗಿದ್ದ ಪಿ ಬಿ ಶ್ರೀನಿವಾಸ್ ಅವರನ್ನು ಹೊರತುಪಡಿಸಿ ಅವರ ಮಿಸ್ಟರ್ ರಾಜ್ಕುಮಾರ್, ಸಿಐಡಿ ರಾಜಣ್ಣ ಚಿತ್ರಗಳಿಗೆ ಬಾಲಸುಬ್ರಹ್ಮಣ್ಯಂ ಧ್ವನಿಯಾಗುತ್ತಾರೆ.
ಎಸ್ಪಿಬಿ ಮೂರನೇ ವರ್ಷದ ಪುಣ್ಯಸ್ಮರಣೆ: ಕರ್ನಾಟಕದ ಜೊತೆ ಗಾನ ಗಂಧರ್ವನ ನಂಟು ಹೀಗಿತ್ತು.. ಡಾ. ರಾಜ್ಕುಮಾರ್ ಬಳಿಕ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಚೊಚ್ಚಲ ಸಿನಿಮಾ ನಾಗರಹಾವು. 1972ರಲ್ಲಿ ತೆರೆ ಕಂಡ ನಾಗರಹಾವು ಚಿತ್ರ ವಿಷ್ಣುವರ್ಧನ್, ಅಂಬರೀಶ್, ಆರತಿ, ಹಿರಿಯ ನಟ ಶಿವರಾಮ್ ಸೇರಿದಂತೆ ಸಾಕಷ್ಟು ಕಲಾವಿದರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡುತ್ತದೆ. ಇದೇ ಸಿನಿಮಾಗೆ ಹಿನ್ನೆಲೆ ಗಾಯಕರಾಗಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಕೆರಿಯರ್ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಡುತ್ತದೆ. ಹಾವಿನ ದ್ವೇಷ 12 ವರುಷ ಎಂದು ಹಾಡಿದ ಎಸ್ಪಿಬಿ ಅಂದಿನಿಂದ ವಿಷ್ಣುವರ್ಧನ್ ಸಿನಿಮಾಗಳಿಗೆ ಖಾಯಂ ಗಾಯಕರಾಗುತ್ತಾರೆ.
ಈ ದೊಡ್ಡ ಯಶಸ್ಸಿನ ನಂತರ ಅನಂತ್ ನಾಗ್ ಹಾಗೂ ಕಲ್ಪನಾ ಅಭಿನಯದ 'ಬಯಲುದಾರಿ' ಸಿನಿಮಾದಲ್ಲಿ ಕನಸಲೂ ನೀನೇ.. ಮನಸಲೂ ನೀನೇ, ಎಲ್ಲಿರುವೆ ಮನವ ಕಾಡುವ ರೂಪಶಿಯೇ ಎಂಬ ಎರಡು ಹಾಡುಗಳನ್ನು ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಅವರು ಎಸ್ಪಿಬಿ ಅವರಿಂದ ಹಾಡಿಸುತ್ತಾರೆ. ಈ ಎರಡು ಹಾಡುಗಳನ್ನು ಕನ್ನಡಿಗರು ಅಪ್ಪಿಕೊಳ್ಳುವ ಮೂಲಕ ಬಾಲಸುಬ್ರಹ್ಮಣ್ಯಂ ಅವರನ್ನು ಸ್ಟಾರ್ ಗಾಯಕನಾಗಿ ಮಾಡುತ್ತಾರೆ.
ಎಸ್ಪಿಬಿ ಮೂರನೇ ವರ್ಷದ ಪುಣ್ಯಸ್ಮರಣೆ: ಕರ್ನಾಟಕದ ಜೊತೆ ಗಾನ ಗಂಧರ್ವನ ನಂಟು ಹೀಗಿತ್ತು.. ಈ ಚಿತ್ರದ ಬಳಿಕ ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ಶಿವರಾಜ್ ಕುಮಾರ್, ಶ್ರೀನಾಥ್, ಶಶಿಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಸಿನಿಮಾಗಳಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಒಂದು ಹಾಡಾದರೂ ಹಾಡುವ ಸಂಪ್ರದಾಯವಿತ್ತು.
ಎಸ್ಪಿಗೆ ಕರ್ನಾಟಕದಲ್ಲಿ ಹೆಚ್ಚು ಗೌರವ:ಬಾಲಸುಬ್ರಹ್ಮಣ್ಯಂ ಅವರಿಗೆ ತೆಲುಗು ಹಾಗೂ ತಮಿಳಿಗಿಂತ ಹೆಚ್ಚಾಗಿ ಪ್ರೀತಿ ಹಾಗೂ ಗೌರವ ಸಿಕ್ಕಿದ್ದು ಕರ್ನಾಟಕದಲ್ಲಿ. ಈ ಮಾತನ್ನು ಎಸ್ಪಿಬಿ ಸಾಕಷ್ಟು ಸಂಗೀತ ಕಾರ್ಯಕ್ರಮಗಳಲ್ಲೂ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ರಾಜೇಶ್ ಕೃಷ್ಣನ್, ಹೇಮಂತ್ ಕುಮಾರ್, ಭದ್ರಿ ಪ್ರಸಾದ್ ಸೇರಿದಂತೆ ಹಲವಾರು ಸೂಪರ್ ಹಿಟ್ ಗಾಯಕರು ಇವರ ಶಿಷ್ಯರು ಅನ್ನೋದು ಹೆಮ್ಮೆಯ ವಿಚಾರ.
ರಾಜೇಶ್ ಕೃಷ್ಣನ್ ಪಾಲಿನ ದೇವರು.. ಅದರಲ್ಲೂ ರಾಜೇಶ್ ಕೃಷ್ಣನ್ ಅವರಿಗೆ ಎಸ್ಪಿಬಿ ಅಂದ್ರೆ ದೇವರ ಸಮಾನ. ರಾಜೇಶ್ ಕೃಷ್ಣನ್ ಅವರು ಗಾಯಕರಾಗುವುದಕ್ಕೂ ಮುನ್ನ ಟ್ರ್ಯಾಕ್ ಸಿಂಗರ್ ಆಗಿದ್ದರು. ಈ ಸಮಯದಲ್ಲಿ ಒಂದು ಸಿನಿಮಾಗೆ ಎಸ್ಪಿವಿ ಅವರ ಹಾಡು ಬೇಕಾಗಿರುತ್ತದೆ. ಆ ಸಮಯದಲ್ಲಿ ಬಾಲಸುಬ್ರಹ್ಮಣ್ಯಂ ರೆಕಾರ್ಡಿಂಗ್ ಸ್ಟುಡಿಯೋಗೆ ಬರುವ ಮುನ್ನ ರಾಜೇಶ್ ಕೃಷ್ಣನ್ ಆ ಹಾಡಿನ ಟ್ರ್ಯಾಕ್ ರೆಡಿ ಮಾಡಿರುತ್ತಾರೆ. ನಾನು ರೆಡಿ ಮಾಡಿರೋ ಟ್ರ್ಯಾಕ್ಗೆ ಎಸ್ಪಿಬಿ ಅವರು ಹೇಗೆ ಹಾಡುತ್ತಾರೆ ಅನ್ನೋ ಕುತೂಹಲದಿಂದ ರಾಜೇಶ್ ಕೃಷ್ಣನ್ ಊಟ, ತಿಂಡಿ ಮಾಡದೇ ಅವರಿಗಾಗಿ ಕಾಯುತ್ತಿರುತ್ತಾರೆ.
ಎಸ್ಪಿಬಿ ಮೂರನೇ ವರ್ಷದ ಪುಣ್ಯಸ್ಮರಣೆ: ಕರ್ನಾಟಕದ ಜೊತೆ ಗಾನ ಗಂಧರ್ವನ ನಂಟು ಹೀಗಿತ್ತು.. ಕೊನೆಗೂ ಎಸ್ಪಿಬಿ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ರಾಜೇಶ್ ಕೃಷ್ಣನ್ ರೆಡಿ ಮಾಡಿದ್ದ ಟ್ರ್ಯಾಕ್ ಅನ್ನು ಹಾಡುತ್ತಾರೆ. ಈ ಹಾಡು ಮುಗಿದ ಬಳಿಕ ರಾಜೇಶ್ ಕೃಷ್ಣನ್ ಅವರು ಬಾಲಸುಬ್ರಹ್ಮಣ್ಯಂ ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಅಲ್ಲಿಂದ ರಾಜೇಶ್ ಕೃಷ್ಣನ್ ಕೂಡ ಹಿನ್ನೆಲೆ ಗಾಯಕರಾಗಿ ಸಕ್ಸಸ್ ಕಂಡಿದ್ದಾರೆ. ಇವ್ರ ಯಶಸ್ಸು ಕಂಡು ಎಸ್ಪಿಬಿ ಒಂದು ಕಾರ್ಯಕ್ರಮದಲ್ಲಿ, ನನ್ನ ಹಾಗೆಯೇ ಹಾಡುವ ಗಾಯಕ ಅಂದ್ರೆ ಅದು ರಾಜೇಶ್ ಕೃಷ್ಣನ್ ಮಾತ್ರ ಎಂದು ಹೇಳಿರುವುದು ಗಮನಾರ್ಹ.
ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಗಾಯಕ: ಇನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡದೇ ಇದ್ರೂ, ಎಸ್ಪಿಬಿ ಕನ್ನಡದಲ್ಲಿ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಗಾಯಕ ಅನ್ನೋದು ನಿಜಕ್ಕೂ ಹೆಮ್ಮೆಯ ವಿಚಾರ. ಹಂಸಲೇಖ ಸಂಗೀತ ನಿರ್ದೇಶನದ ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ನಿಜಗುಣ ಶಿವಯೋಗಿ ಹಾಡಿಗೆ ಎಸ್.ಪಿ ಬಾಲಸುಬ್ರಹ್ಮಣ್ಯಂ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಹಾಡನ್ನು ಹಾಡುವುದಕ್ಕೆ ಬಾಲಸುಬ್ರಹ್ಮಣ್ಯಂ ಒಂದು ದಿನ ಮನೆಯಲ್ಲಿ ಅಭ್ಯಾಸ ಮಾಡಿ ಹಾಡಿದ್ರಂತೆ.
ಜೊತೆಗೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಡಾ. ರಾಜ್ಕುಮಾರ್ ಜೊತೆ ಹಾಡು ಹಾಡಬೇಕೆಂಬ ಆಸೆಯಿತ್ತಂತೆ. ಆದರೆ ಅದು ಸಾಧ್ಯ ಆಗಲಿಲ್ಲ. ಈ ಕಾರಣಕ್ಕೆ ಬಾಲಸುಬ್ರಹ್ಮಣ್ಯಂ ಅಮೋಘವಾಗಿ ನಟಿಸಿದ್ದ ಮುದ್ದಿನ ಮಾವ ಸಿನಿಮಾದಲ್ಲಿ ಒಂದು ಹಾಡನ್ನು ಅಣ್ಣಾವ್ರು ಹಾಡಿದ್ರೆ ಚೆನ್ನಾಗಿರುತ್ತದೆ ಅಂತ ಸ್ವತಃ ಎಸ್ಪಿಬಿ ಅವರೇ ಹೇಳಿದ್ದರಂತೆ. ಆಗ ಅಣ್ಣಾವ್ರು ನಗುತ್ತಾ, ನಿಮ್ಮಂತಹ ಮಹಾನ್ ಗಾಯಕ ಇರಬೇಕಾದ್ರೆ ನಾನು ಹಾಡೋಲ್ಲ ಅಂದಿದ್ರಂತೆ. ಬಳಿಕ ಈ ಹಾಡನ್ನು ನೀವು ಹಾಡಿದ್ರೆ ಚೆನ್ನಾಗಿರುತ್ತೆ ಅಂತ ಎಸ್ಪಿಬಿ ಹೇಳಿದ್ರು ಎಂಬ ಕಾರಣಕ್ಕೆ ದೀಪಾವಳಿ ದೀಪಾವಳಿ ಹಾಡನ್ನು ಅಂದು ಅಣ್ಣಾವ್ರು ಹಾಡಿದ್ದರಂತೆ.
ಇನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ತಮಿಳು, ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಹಾಡಿದ್ದಾರೆ. ಅದೇ ರೀತಿ ಕನ್ನಡದಲ್ಲೂ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ನಿರ್ದೇಶನದಲ್ಲಿ ಬರೋಬ್ಬರಿ ಒಂದು ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ 21 ಹಾಡುಗಳನ್ನು ಹಾಡುವ ಮೂಲಕ ದಾಖಲೆ ಮಾಡಿದ್ದರು.
ಎಸ್.ಪಿ ಬಾಲಸುಬ್ರಹ್ಮಣ್ಯಂ ಹುಟ್ಟಿರೋದು ಆಂಧ್ರಪ್ರದೇಶದಲ್ಲಾದ್ರೂ, ನಮ್ಮ ಕನ್ನಡವನ್ನು ಕಲಿತುಕೊಂಡು, ಕರ್ನಾಟಕದಲ್ಲಿ ಉತ್ತುಂಗದ ಶಿಖರಕ್ಕೆ ಏರಿದ್ದು ದೊಡ್ಡ ಸಾಧನೆಯೇ ಸರಿ. ಇದರ ಜೊತೆಗೆ ಕನ್ನಡದಲ್ಲೇ ಎಸ್ಪಿಬಿ ಸಿನಿಮಾ ಹಾಡುಗಳು ಹಾಗೂ ಭಕ್ತಿ ಗೀತೆಗಳು ಅಂತ ಬರೋಬ್ಬರಿ 8 ರಿಂದ 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರೋದು ಅವರ ಹೆಗ್ಗಳಿಕೆ.
ಇದನ್ನೂ ಓದಿ:SPB ನೆನೆದ ಸೂಪರ್ ಸ್ಟಾರ್ ರಜನಿ....ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆ ಹಾಡು ರಿಲೀಸ್!