ಇಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಬ್ರಿಟಿಷ್ ದಾಸ್ಯದಿಂದ ಸಂಪೂರ್ಣವಾಗಿ ಹೊರಬಂದು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡ ಮಹತ್ವದ ದಿನವಿದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪಿತವಾದ ಭವ್ಯ ಸಂವಿಧಾನವನ್ನು ಜನವರಿ 26, 1950 ರಂದು ಜಾರಿ ಮಾಡಲಾಯಿತು. ಈ ಹಿನ್ನೆಲೆ ಪ್ರತೀ ಜನವರಿ 26ನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ 74ನೇ ಗಣರಾಜ್ಯೋತ್ಸ ವ ಆಚರಿಸಲಾಗಿದ್ದು, ದೇಶಭಕ್ತಿ ಮೂಡಿಸುವ ಕೆಲ ಸಂಗೀತಗಳು ಈ ಕೆಳಗಿನಂತಿದೆ.
ದೇಶಭಕ್ತಿ ಮೂಡಿಸುವ ಹಾಡುಗಳು: ಕೆಲವು ದೇಶಭಕ್ತಿಯ ಸಂಗೀತವನ್ನು ಕೇಳುವ ಮೂಲಕ ಆಪ್ತ ಸ್ನೇಹಿತರು, ಸಹುದ್ಯೋಗಿಗಳು, ಸಹಪಾಠಿ ಮತ್ತು ಕುಟುಂಬದೊಂದಿಗೆ ಗಣರಾಜ್ಯ ಸೇರಿದಂತೆ ಭವ್ಯ ದಿನಗಳನ್ನು ಆಚರಿಸಬಹುದಾಗಿದೆ. ಇಂತಹ ಪರಿಸ್ಥಿತಿಗೆ ಬಾಲಿವುಡ್ನ ಕೆಲ ಸಂಗೀತಗಳು ನೆರವಿಗೆ ಬಂದಿದೆ. ಗಾಯಕಿ ಲತಾ ಮಂಗೇಶ್ಕರ್ ಅವರ "ಏ ಮೇರೆ ವತನ್ ಕೆ ಲೋಗೋನ್" ನಿಂದ "ಮೇರಿ ದೇಶ್ ಕಿ ಧರ್ತಿ" ವರೆಗೆ ಭಾರತದ ಕೀರ್ತಿ ಹೆಚ್ಚಿಸುವ, ದೇಶಭಕ್ತಿ ಮೂಡಿಸುವ ಅನೇಕ ಹಾಡುಗಳಿವೆ.
ಕೇಸರಿ ಚಿತ್ರದ ತೇರಿ ಮಿಟ್ಟಿ: 2019ರಲ್ಲಿ ತೆರೆಕಂಡ ಕೇಸರಿ ಚಿತ್ರದ ತೇರಿ ಮಿಟ್ಟಿ ಹಾಡು. ಅದ್ಭುತ ಸಾಹಿತ್ಯ, ಭಾವಪೂರ್ಣ ಸಂಗೀತದ ಮೂಲಕ ದೇಶದ ಸೈನಿಕರ ತ್ಯಾಗಕ್ಕೆ ಗೌರವ ಸೂಚಿಸಲಾಗಿದೆ. ಈ ಹಾಡು ಕೇಳುವ ಸಂದರ್ಭದಲ್ಲಿ ಇಂದಿನ ಸ್ವತಂತ್ರ್ಯ ಭಾರತಕ್ಕಾಗಿ ಹೋರಾಟದಲ್ಲಿ ವೀರ ಮರಣ ಹೊಂದಿದ ಅನೇಕ ಯೋಧ ಜೀವಗಳನ್ನು ನೀವು ನೆನಪಿಸಿಕೊಳ್ಳುತ್ತೀರಿ. ಮನೋಜ್ ಮುಂತಾಶಿರ್ ಸಾಹಿತ್ಯವಿದ್ದು, ಪಂಜಾಬಿ ಗಾಯಕ ಬಿ ಪ್ರಾಕ್ ಹಾಡನ್ನು ಹಾಡಿದ್ದಾರೆ. ಆರ್ಕೊ ಪ್ರವೋ ಮುಖರ್ಜಿ ಸಂಗೀತ ಸಂಯೋಜಕರು. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಈ ಹಾಡನ್ನು (feminine version) ಹಾಡಿದ್ದಾರೆ.
ರಾಝಿ ಸಿನಿಮಾದ ಏ ವತನ್:ಏ ವತನ್ ಹಾಡು 2018ರ ರಾಝಿ ಸಿನಿಮಾದ ರಾಷ್ಟ್ರೀಯತೆಯ ಹಾಡು. ಸುನಿಧಿ ಚೌಹಾಣ್ ಮತ್ತು ಅರಿಜಿತ್ ಸಿಂಗ್ ಅವರು ಈ ಹಾಡನ್ನು ಹಾಡಿದ್ದಾರೆ. ಗುಲ್ಜಾರ್ ಮತ್ತು ಅಲ್ಲಮ ಇಕ್ಬಾಲ್ ಅವರ ಸಾಹಿತ್ಯವಿದ್ದು, ಶಂಕರ್ ಎಹ್ಸಾನ್ ಲಾಯ್ ಸಂಗೀತ ಸಂಯೋಜಕರು. ಹಾಡಿನ ವಿಡಿಯೋದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಸೆಹಮತ್ ಖಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವ್ಯಕ್ತಿಯೊಬ್ಬನ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸುತ್ತದೆ.