ಹರಿಯಾಣದ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ (43) ಗೋವಾದಲ್ಲಿ ಸೋಮವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಫೋಗಟ್ ತಮ್ಮ ಕೆಲವು ಸಿಬ್ಬಂದಿಯೊಂದಿಗೆ ಗೋವಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಂಜುನಾದ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ನಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಸಾವಿನ ಸಂಬಂಧ ಕುಟುಂಬಸ್ಥರು ಹಲವು ಪ್ರಶ್ನೆಗಳನ್ನು ಎತ್ತಿದ್ದು, ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸೋನಾಲಿ ಫೋಗಟ್ ಸಾವಿನ ಕುರಿತು ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಸೋನಾಲಿ ಸಹೋದರ ರಿಂಕು ಢಾಕಾ ಅವರು ಗೋವಾ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸಹೋದರಿಯ ಇಬ್ಬರು ಸಹಾಯಕರು (assistant) ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋನಾಲಿ ಫೋಗಟ್ ಅತ್ಯಾಚಾರ:ಸೋನಾಲಿ ಪಿಎ ಸುಧೀರ್ ಸಾಂಗ್ವಾನ್, ಸುಖ್ವಿಂದರ್ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಮಾಡಿದ್ದಾರೆ. ಸಾಂಗ್ವಾನ್ ತಮ್ಮ ಸ್ನೇಹಿತ ಸುಖ್ವಿಂದರ್ ಜೊತೆ ಸೇರಿ ಆಕ್ಷೇಪಾರ್ಹ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಆಹಾರದಲ್ಲಿ ಮದ್ದು ಬೆರೆಸಿ ಬಳಿಕ ಅತ್ಯಾಚಾರ ಮಾಡಿ ಕೊಲೆ ಎಸಗಿದ್ದಾರೆ. ಹತ್ಯೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ಸೋನಾಲಿ 2019ರಲ್ಲಿ ತಮ್ಮ ರಾಜಕೀಯ ಅವಧಿಯಲ್ಲಿ ಸುಧೀರ್ ಮತ್ತು ಸುಖ್ವಿಂದರ್ ಅವರನ್ನು ಭೇಟಿಯಾಗಿದ್ದರು. ಸುಧೀರ್ ರೋಹ್ಟಕ್ ಮೂಲದವರು ಮತ್ತು ಸುಖ್ವಿಂದರ್ ಹರಿಯಾಣದ ಭಿವಾನಿಯವರು. 2021ರಲ್ಲಿ ಸೋನಾಲಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುಧೀರ್ ಈ ಕೃತ್ಯದ ಹಿಂದೆ ಇದ್ದನು. ಆದರೆ ಘಟನೆಯ ನಂತರ ಅಡುಗೆಯವರು ಮತ್ತು ಇತರೆ ಸಿಬ್ಬಂದಿಯನ್ನು ವಜಾಗೊಳಿಸಲಾಯಿತು. ಸುಧೀರ್ ಮಾಡಿದ್ದ ಖೀರ್(ಆಹಾರ ಪದಾರ್ಥ) ತಿಂದು ಅಸ್ವಸ್ಥ ಅನುಭವ ಆಗಿದ್ದ ಬಗ್ಗೆ ಸೋನಾಲಿ ಸ್ವತಃ ತನಗೆ ಹೇಳಿದ್ದರು ಎಂದು ಸಹೋದರ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.