ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಡುವ ಜನಪ್ರಿಯ ಬಿಗ್ ಬಾಸ್ ಸೀಸನ್ 10 ನಾನಾ ವಿಷಯಗಳಿಂದ ಸದ್ದು ಮಾಡುತ್ತಿದೆ. ಸಾವಿರಾರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ರವಾನಿಸಿರುವ ಸ್ನೇಕ್ ಶ್ಯಾಮ್ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ 'ಅಸಮರ್ಥ'ರ ಗುಂಪಿನಲ್ಲಿರುವ ಸ್ಪರ್ಧಿ. ಆದ್ರೆ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಅವರೆಂಥ ಸಮರ್ಥರು ಎಂಬುದನ್ನು ತಿಳಿದುಕೊಳ್ಳಬೇಕಾದರೆ 'JioCinema'ದಲ್ಲಿ ಲಭ್ಯವಿರುವ ಬಿಗ್ ಬಾಸ್ ಕನ್ನಡದ 'Live Shorts' ಸೆಗ್ಮೆಂಟ್‌ನಲ್ಲಿರುವ ಈ ವಿಡಿಯೋ ನೋಡಲೇಬೇಕು.
ಸ್ಪರ್ಧಿಗಳು ಈಜುಕೊಳದ ಬಳಿ ಕುಳಿತು ಹರಟೆ ಹೊಡೆಯುತ್ತಿದ್ದ ವೇಳೆ ಸ್ನೇಕ್ ಶ್ಯಾಮ್ ಅವರು ಹಾವುಗಳ ಕುರಿತಾದ ಹಲವು ರೋಚಕ ಸಂಗತಿಗಳನ್ನು ನಿರರ್ಗಳವಾಗಿ ತೆರೆದಿಟ್ಟಿದ್ದಾರೆ. ಅವರು ಹೇಳಿದ ಸಂಗತಿಗಳನ್ನು ಕೇಳಿ ಸ್ಪರ್ಧಿಗಳು ಬೆರಗಾಗಿದ್ದಾರೆ.
ಅದನ್ನು ಅವರ ಮಾತುಗಳಲ್ಲೇ ಕೇಳಿ: ''ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆ ಬೆಳವಣಿಗೆಯಾಗುತ್ತದೆ. ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಆ್ಯಂಡ್ ಮೀಟಿಂಗ್ ಎರಡಕ್ಕೇನೇ. ನಮ್ಮ ತರ ಅಲ್ಲ. ನಾವು ಎಲ್ಲದಕ್ಕೂ ಹೊಡೆದಾಡುತ್ತೇವೆ. ಮೀಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವುಗಳು ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತವೆ. ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವತನಕ ಕಾಯುತ್ತದೆ. ಮನುಷ್ಯರಂತೆ ಒಂಭತ್ತು ತಿಂಗಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು ಅಂತೆಲ್ಲ ಮಾಡಲ್ಲ. ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುತ್ತವೆ. ಮೊಟ್ಟೆ ಇಟ್ಟಮೇಲೆ ಕೆಲ ಜಾತಿಯ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡ್ತವೆ. ಇನ್ನು ಕೆಲವು ಜಾತಿಗೆ ಸೇರಿದ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45-65ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ''.
''ಬಹುತೇಕ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕುತ್ತವೆ. ಅವು ಯಾವುವೆಂದರೆ, ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತು ಮಂಡಲ ಹಾವು. ಈ ಮೂರು ಜಾತಿಯ ಹಾವುಗಳು ಮರಿ ಹಾಕತ್ತವೆ. ಆದರೆ ಇವು ಸಸ್ತನಿ ಅಲ್ಲ. ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಡಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ. ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರುತ್ತವೆ. ನಮ್ಮಂತೆ ಹುಟ್ಟಿದ ಮೇಲೆ ಬೇರೆಯವರ ಮೇಲೆ ಡಿಪೆಂಡ್ ಆಗಿರುವುದಿಲ್ಲ. ಅವುಗಳ ಪಾಡಿಗೆ ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ-ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ''.