ಕನ್ನಡತಿ ಶ್ರೀಲೀಲಾ ಟಾಲಿವುಡ್ ಸಿನಿ ನೆಲದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ತೆಲುಗಿನ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೆನ್ಸೇಶನಲ್ ನಟಿ ಶ್ರೀಲೀಲಾ ನಟನೆಯ ಸ್ಕಂದ ಸಿನಿಮಾ ಇಂದು ತೆರೆಗಪ್ಪಳಿಸಿದೆ. ಉಳಿದ ಐದಾರು ಚಿತ್ರಗಳು ಒಂದಾದ ಬಳಿಕ ಒಂದರಂತೆ ಬಿಡುಗಡೆ ಆಗಲಿವೆ. ಎಲ್ಲಾ ಸಿನಿಮಾಗಳ ಕುರಿತು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಸ್ಕಂದ ತೆರೆಗೆ:ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ಯಾನ್ ಇಂಡಿಯಾ ಸಿನಿಮಾ ಸ್ಕಂದ ತೆರೆಗಪ್ಪಳಿಸಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಶನ್ನ ಸ್ಕಂದ ಚಿತ್ರ ಸದ್ಯ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ.
ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ್ ಚಿತ್ತೂರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಭಾರಿ ನಿರೀಕ್ಷೆಗಳೊಂದಿಗೆ ಸಿನಿಮಾ ಇಂದು (ಸೆಪ್ಟೆಂಬರ್ 28, ಗುರುವಾರ) ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಚಿತ್ರದ ಕುರಿತು ಪಾಸಿಟಿವ್ ಟಾಕ್ ಆಗುತ್ತಿದೆ. ನಾಯಕ ನಟ ರಾಮ್ ಪೋತಿನೇನಿ ಎಂಟ್ರಿ ಜಬರ್ದಸ್ತ್ ಆಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ತಮನ್ ಸಂಗೀತ ಪ್ರೇಕ್ಷಕರ ಮನ ಸೆಳೆದಿದೆ. ಮೊದಲ ಶೋಗಳಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರ ಎಷ್ಟರ ಮಟ್ಟಿಗೆ ಗೆಲುವು ಸಾಧಿಸಲಿದೆ ಎಂಬುದು ಅತಿ ಶೀಘ್ರದಲ್ಲೇ ಗೊತ್ತಾಗಲಿದೆ.