ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನರಾಗಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ವಾಣಿ ಜಯರಾಂ ಇಂದು ಇಹಲೋಕ ತ್ಯಜಿಸಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬೆಂಗಾಲಿ, ಬೋಜ್‌ಪುರಿ, ತುಳು ಮತ್ತು ಒಡಿಯಾ ಹೀಗೆ 12 ಭಾಷೆಯ ಸಿನಿಮಾಗಳಲ್ಲಿ ಹಾಡಿ ಸೈ ಎನ್ನಿಸಿಕೊಂಡಿದ್ದ ವಾಣಿ ಜಯರಾಂ ಭಾರತೀಯ ಚಿತ್ರರಂಗ ಕಂಡ ಅದ್ಭುತ ಗಾಯಕಿ.
ಸ್ಯಾಂಡಲ್ವುಡ್ಗೆ ಎಂಟ್ರಿ:ಕನ್ನಡ ಸೇರಿದಂತೆ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿರುವ ಗಾಯಕಿ ವಾಣಿ ಜಯರಾಂ ಕನ್ನಡ ಚಿತ್ರರಂಗದಲ್ಲೂ ಹಲವು ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಸಿನಿಮಾಗಳಿಗೆ ಹಾಡುವ ಮೂಲಕ ಬೇಡಿಕೆಯ ಗಾಯಕಿಯಾಗಿದ್ದ ವಾಣಿ ಜಯರಾಂ ಅವರು 1974ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಉಪಾಸನೆ ಚಿತ್ರದಲ್ಲಿ 'ಭಾವವೆಂಬ ಹೂವು ಅರಳಿ' ಎಂಬ ಹಾಡನ್ನು ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
70ರ ದಶಕದಲ್ಲಿ ಬೇಡಿಕೆಯಲ್ಲಿದ್ದ ಸಂಗೀತ ನಿರ್ದೇಶಕ ವಿಜಯ್ ಭಾಸ್ಕರ್ ಅವರು ಉಪಾಸನೆ ಚಿತ್ರದಲ್ಲಿ ಗಾಯಕಿ ವಾಣಿ ಜಯರಾಂ ಅವರಿಂದ ಹಾಡು ಹಾಡಿಸುವ ಮೂಲಕ ಅವರನ್ನು ಕನ್ನಡಕ್ಕೆ ಪರಿಚಯಿಸುತ್ತಾರೆ. ಅಲ್ಲಿಂದ ವಾಣಿ ಜಯರಾಂ 90ರ ದಶಕದವರೆಗೂ ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಾರೆ. ಉಪಾಸನೆ ಚಿತ್ರದಿಂದ ಶುರುವಾದ ವಾಣಿ ಜಯರಾಂ ಗಾಯನ ಪಯಣ ಶುಭಮಂಗಳ, ದೀಪ, ಅಪರಿಚಿತ, ಕಸ್ತೂರಿ ವಿಜಯ, ಚಿರಂಜೀವಿ, ಬೆಸುಗೆ, ಬಿಳಿ ಹೆಂಡ್ತಿ, ಕೌಬಾಯ್ ಕುಳ್ಳ, ಕೆಸರಿನ ಕಮಲ ಹೀಗೆ ಬರೋಬ್ಬರಿ 850ಕ್ಕೂ ಹೆಚ್ಚು ಹಾಡುಗಳನ್ನು ವಾಣಿ ಜಯರಾಂ ಕನ್ನಡದಲ್ಲಿ ಹಾಡುವ ಮೂಲಕ ತನ್ನದೇ ಛಾಪು ಮೂಡಿಸಿದ್ದರು. ಆ ಕಾಲದ ಸೂಪರ್ ಸ್ಟಾರ್ಗಳಾದ ಡಾ. ರಾಜ್ಕುಮಾರ್, ಬಾಲಕೃಷ್ಣ, ಶ್ರೀನಾಥ್,ಅಶೋಕ್, ರಾಮಕೃಷ್ಣ ಹಾಗೂ ನಟಿಯರಾದ ಕಲ್ಪನ, ಆರತಿ, ಮಂಜುಳ ಹೀಗೆ ಹಲವರ ಸಿನಿಮಾಗಳಲ್ಲಿ ವಾಣಿ ಜಯರಾಂ ಹಾಡಿರೋದು ವಿಶೇಷ.
ಇದನ್ನೂ ಓದಿ:ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇನ್ನಿಲ್ಲ
ವಾಣಿ ಜಯರಾಂ ಕನ್ನಡ ಹಾಡುಗಳು:ವಾಣಿ ಜಯರಾಂ ಹಾಡಿರುವ ಕೆಲ ಹಾಡುಗಳನ್ನು ಮೆಲುಕು ಹಾಕುತ್ತಾ ಹೋದರೆ, ಈ ಶತಮಾನದ ಮಾದರಿ ಹೆಣ್ಣು, ದಾರಿ ಕಾಣದಾಗಿದೆ ರಾಘವೇಂದ್ರನೆ, ಸವಿ ನೆನಪುಗಳು ಬೇಕು ಸವಿಯಲೀ ಬದುಕು, ಓ ತಂಗಾಳಿಯೇ ನೀನಿಲ್ಲಿಗೆ ಓಡೋಡಿ ನಲಿದು ಒಲಿದು ಬಾ, ಲೈಫ್ ಈಸ್ ಎ ಮೆರ್ರಿ ಮೆಲೋಡಿ, ಮೋಹನಾಂಗ ನಿನ್ನ ಕಂಡು ಓಡಿ ನಾ ಬಂದೆನೋ, ತೆರೆದಿದೆ ಮನೆ ಓ ಬಾ ಅತಿಥಿ, ಮಧು ಮಾಸ ಚಂದ್ರಮ ನೈದಿಲೆಗೆ ಸಂಭ್ರಮ, ವಸಂತ ಬರೆದನು ಒಲವಿನ ಓಲೆ, ಕಾರ್ಮೋಡ ನೀರಾದ ವೇಳೆಯಲಿ, ಗೌರಿ ಮನೋಹರಿಯ ಕಂಡೆ, ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ, ಈ ಜೀವ ನಿನದೇ ಈ ಭಾವ ನಿನದೇ, ಅಧರಂ ಮಧುರಂ ವದನಂ ಮಧುರಂ, ನನ್ನೆದೆ ವೀಣೆಯು ಮಿಡಿಯುವುದು, ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ ಹೀಗೆ ಕನ್ನಡದಲ್ಲಿ ಸಾಕಷ್ಟು ಹಿಟ್ ಹಾಡುಗಳನ್ನ ವಾಣಿಜಯರಾಂ ಹಾಡಿದ್ದಾರೆ. ಹಲವು ಭಾಷೆಗಳಲ್ಲಿ ಹಾಡಿರುವ ಗಾಯಕಿ ವಾಣಿ ಜಯರಾಂ ಇನ್ನು ನೆನಪು ಮಾತ್ರ. ಈ ಪ್ರಸಿದ್ಧ ಗಾಯಕಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.