ಮನರಂಜನಾ ಕ್ಷೇತ್ರ ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಭಿನ್ನ ರೂಪದಲ್ಲಿ ಜನರನ್ನು ರಂಜಿಸುವ, ಪ್ರೇಕ್ಷಕರ ಮನಮುಟ್ಟುವ ಕೆಲಸವನ್ನು ಈ ಕ್ಷೇತ್ರ ಮಾಡುತ್ತಾ ಬಂದಿದೆ. ಆ ಪೈಕಿ ಸಂಗೀತ ವಲಯ ತನ್ನದೇ ಆದ ಮಹತ್ವದ ಸ್ಥಾನ ಹೊಂದಿದೆ. ಸಂಗೀತ ವಲಯದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ನೀಡುವ ಅತ್ಯುನ್ನತ ಪ್ರಶಸ್ತಿಗಳ ಪೈಕಿ ಗ್ರ್ಯಾಮಿ ಆವಾರ್ಡ್ಸ್ ಕೂಡ ಒಂದು.
ಗ್ರ್ಯಾಮಿ - ಸಂಗೀತ ಉದ್ಯಮದ ಪ್ರತಿಷ್ಠಿತ ಪ್ರಶಸ್ತಿ: ಗ್ರ್ಯಾಮಿ ಪ್ರಶಸ್ತಿ ಅಥವಾ ಸರಳವಾಗಿ ಗ್ರ್ಯಾಮಿಸ್ ಎಂದು ಕರೆಯಲ್ಪಡುವ ಈ ಗೌರವ ಸಂಗೀತೋದ್ಯಮದ ಸಾಧಕರಿಗೆ ಸಿಗುವ ಪ್ರತಿಷ್ಟಿತ ಪುರಸ್ಕಾರ. ಪ್ರತಿಭೆಗಳ ಅತ್ಯುತ್ತಮ ಸಾಧನೆಗಳನ್ನು ಗುರುತಿಸುವ ಸಲುವಾಗಿ ಯುನೈಟೆಡ್ ಸ್ಟೇಟ್ಸ್ನ ರೆಕಾರ್ಡಿಂಗ್ ಅಕಾಡೆಮಿಯು ಕೊಡಮಾಡುವ ಪ್ರಶಸ್ತಿ ಇದು. ಗ್ಯಾಮಿಯನ್ನು ಸಂಗೀತ ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ಮಹತ್ವದ ಪ್ರಶಸ್ತಿ ಎಂದೇ ಪರಿಗಣಿಸಲಾಗಿದೆ.
ದಿ ರೆಕಾರ್ಡಿಂಗ್ ಅಕಾಡೆಮಿ ಮತದಾನದ ಸದಸ್ಯತ್ವ: ಅಮೆರಿಕದ ಪ್ರತಿಷ್ಠಿತ ರೆಕಾರ್ಡಿಂಗ್ ಅಕಾಡೆಮಿ (ಗ್ರ್ಯಾಮಿ ಪ್ರಶಸ್ತಿ) ಅವರು ಪ್ರತಿ ಸಾಲಿನಂತೆ ಈ ವರ್ಷ ಕೂಡ ಆಯ್ದ ಸಂಗೀತಗಾರರನ್ನು "ದಿ ರೆಕಾರ್ಡಿಂಗ್ ಅಕಾಡೆಮಿ" ಗೆ ಮತದಾನದ ಸದಸ್ಯರಾಗಲು ಆಹ್ವಾನಿಸಿದ್ದರು. ಈ ಬಾರಿ ಆಸ್ಟ್ರೇಲಿಯಾದ ಮೆಲ್ಬೊರ್ನ್ ನಿವಾಸಿ, ಭಾರತೀಯ ಗಾಯಕ ಶ್ರೀರಾಮ್ ಅಯ್ಯರ್ ಅವರು ಮತದಾನದ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.