ಮುಂಬೈ:ಪ್ರಸಿದ್ಧಗಾಯಕ ಸೋನು ನಿಗಮ್ ಅವರ 76 ವರ್ಷದ ವೃದ್ಧ ತಂದೆಯ ಮನೆಯಲ್ಲಿ ಕಳ್ಳತನವಾಗಿದೆ. ಮಾಜಿ ಕಾರು ಚಾಲಕನೇ ಈ ಕೃತ್ಯ ನಡೆಸಿದ್ದಾನೆ. ಆತ ಮನೆಯಿಂದ 72 ಲಕ್ಷ ರೂ.ಗಳನ್ನು ಕದ್ದಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಆತನ ವಿರುದ್ಧ ಕಳ್ಳತನ ಮತ್ತು ಅತಿಕ್ರಮ ಪ್ರವೇಶ ನಡೆಸಿದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋನು ನಿಗಮ್ ತಂದೆ ಆಗಮಕುಮಾರ್ ನಿಗಮ್ ಅವರು ಅಂಧೇರಿ ಪಶ್ಚಿಮದ ಓಶಿವಾರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ 19 ಮತ್ತು ಮಾರ್ಚ್ 20 ರ ನಡುವೆ ಕಳ್ಳತನ ನಡೆದಿದೆ ಎಂದು ದೂರಿದ್ದಾರೆ.
ಆಗಮಕುಮಾರ್ ಅವರು ಸುಮಾರು 8 ತಿಂಗಳಿನಿಂದ ರೆಹಾನ್ ಎಂಬ ಚಾಲಕನನ್ನು ಹೊಂದಿದ್ದರು. ಆದರೆ, ಆತನ ಕೆಲಸ ಉತ್ತಮವಾಗಿರದ ಕಾರಣ ಆತನನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಭಾನುವಾರ (ಮಾರ್ಚ್ 19) ಮಧ್ಯಾಹ್ನ ಆಗಮಕುಮಾರ್ ಅವರು ವರ್ಸೋವಾ ಪ್ರದೇಶದಲ್ಲಿರುವ ಮಗಳು ನಿಕಿತಾ ಅವರ ಮನೆಗೆ ಊಟಕ್ಕೆ ಭೇಟಿ ತೆರಳಿದ್ದರು. ಸ್ವಲ್ಪ ಸಮಯದ ನಂತರ ಹಿಂತಿರುಗಿದಾಗ, ಮನೆಯ ಕಬೋರ್ಡ್ನಲ್ಲಿ ಇಟ್ಟಿದ್ದ 40 ಲಕ್ಷ ರೂಪಾಯಿ ಕಳ್ಳತನವಾಗಿದ್ದು ಗೊತ್ತಾಗಿದೆ.
ಎರಡನೇ ಬಾರಿ ಮತ್ತೆ ಕಳ್ಳತನ:ವಿಷಯವನ್ನು ಆಗಕುಮಾರ್ ಅವರು ಮಗಳಿಗೆ ತಿಳಿಸಿದ್ದರು. ಡಿಜಿಟಲ್ ಲಾಕರ್ ಒಳಗಿದ್ದ ಹಣವನ್ನು ಕದ್ದಿರುವುದು ಹಲವು ಅನುಮಾನಗಳನ್ನು ಮೂಡಿಸಿತ್ತು. ಈ ಬಗ್ಗೆ ದೂರು ಕೂಡ ನೀಡಲಾಗಿದೆ. ಮರುದಿನ ಆಗಮಕುಮಾರ್ ಅವರು ವೀಸಾ ಸಂಬಂಧಿತ ಕೆಲಸದ ನಿಮಿತ್ತ ಸೋನು ನಿಗಮ್ ಅವರ ಮನೆಗೆ ಬಂದು ಹೋಗಿದ್ದರು. ಈ ವೇಳೆ ಲಾಕರ್‌ನಿಂದ ಇನ್ನೂ 32 ಲಕ್ಷ ರೂಪಾಯಿ ಎಗರಿಸಿದ್ದು ಕಂಡುಬಂದಿದೆ. ಈ ಬಗ್ಗೆ ಭೀತಿಗೊಂಡ ಕುಟುಂಬ ತಕ್ಷಣವೇ ಎಚ್ಚೆತ್ತುಕೊಂಡಿದೆ.