ಮುಂಬೈ (ಮಹಾರಾಷ್ಟ್ರ): ಸೆಲೆಬ್ರೆಟಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಬಹಳಷ್ಟು ಜನರು ಇಷ್ಟಪಡುತ್ತಾರೆ. ಇತ್ತೀಚೆಗಷ್ಟೇ ಕ್ರಿಕೆಟಿಗ ಪೃಥ್ವಿ ಶಾ ಅವರ ಮೇಲೂ ಫೋಟೋಗೆ ಅನುಮತಿಸಿಲ್ಲ ಎಂಬ ಕಾರಣಕ್ಕೆ ಹಲ್ಲೆ ಆಗಿತ್ತು. ಈಗ ಇದೇ ರೀತಿಯ ಘಟನೆ ಮುಂಬೈನಲ್ಲಿ ನಡೆದಿದ್ದು, ಗಾಯಕ ಸೋನು ನಿಗಮ್ ಅವರ ಮೇಲೆ ಫೋಟೋಕ್ಕೆ ಅನುಮತಿ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳಿಂದ ಹಲ್ಲೆಯಾಗಿದೆ. ಈ ಬಗ್ಗೆ ಸೋನು ನಿಗಮ್ ದೂರು ದಾಖಲಿಸಿದ್ದಾರೆ.
ಸೋಮವಾರ ರಾತ್ರಿ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಗಾಯಕ ಸೋನು ನಿಗಮ್ ಅವರ ಲೈವ್ ಕನ್ಸರ್ಟ್ ಸಂದರ್ಭದಲ್ಲಿ ಈ ಘಟನೆ ಆಗಿದೆ. ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಸೋನು ನಿಗಮ್ ನೀಡಿದ ದೂರಿನ ಪ್ರಕಾರ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), 341 (ತಪ್ಪು ಸಂಯಮ), ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ನಂತರ ಮಾತನಾಡಿದ ಡಿಸಿಪಿ ಹೇಮರಾಜ್‌ಸಿಂಗ್ ರಜಪೂತ್, "ಸ್ವಪ್ನಿಲ್ ಫಾಟರ್‌ಪೇಕರ್ ಎಂಬಾತ ಲೈವ್ ಕನ್ಸರ್ಟ್ ಮುಗಿಸಿ ವೇದಿಕೆಯಿಂದ ಬರುತ್ತಿದ್ದ ಸೋನು ನಿಗಮ್ ಅವರನ್ನು ತಡೆದಿದ್ದಾನೆ. ಆಗ ಸೋನು ನಿಗಮ್ ಅವರ ಅಂಗರಕ್ಷಕರು ಸ್ವಪ್ನಿಲ್ ಅವರನ್ನು ತಡೆಯಲೆತ್ನಿಸಿದ್ದಾರೆ. ಈ ವೇಳೆ ಸ್ವಪ್ನಿಲ್ ಕಡೆಯವರು ಮತ್ತು ಸೋನು ನಿಗಮ್ ಅಂಗರಕ್ಷಕರ ನಡುವೆ ತಳ್ಳಾಟ ಆಗಿದೆ. ಇದರಲ್ಲಿ ಸೋನು ನಿಗಮ್ ಕಡೆಯ ಒಬ್ಬರಿಗೆ ಗಾಯವಾಗಿದೆ. ಗಾಯಾಳು ಹೆಸರು ರಬ್ಬಾನಿ" ಎಂದು ತಿಳಿಸಿದ್ದಾರೆ.
ಸೋನು ನಿಗಮ್ ಅವರ ದೂರಿನ ಪ್ರಕಾರ, ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಹಲ್ಲೆ ನಡೆದಿದೆ. ಘಟನೆಯ ನಂತರ ಗಾಯಕ ಸೋನು ನಿಗಮ್ ಚೆಂಬೂರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.