ಬಳ್ಳಾರಿ:ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಸುದ್ದಿ ಹರಡಿತ್ತು. ಆದರೆ ಸುದ್ದಿಯನ್ನು ಮಂಗ್ಲಿ ತಳ್ಳಿ ಹಾಕಿದ್ದು, ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವದಂತಿಗಳನ್ನು ನಂಬಬೇಡಿ, ಆಂತಹ ಯಾವುದೇ ದಾಳಿ ನಡೆದಿಲ್ಲ ಎಂದು ಹೇಳಿದ್ದಾರೆ.
ಮಂಗ್ಲಿ ಅವರ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಅವರಿದ್ದ ಕಾರಿಗೆ ಕಿಡಿಗೇಡಿಗಳು ಮುತ್ತಿಗೆ ಹಾಕಿದ್ದಲ್ಲದೆ, ಕಲ್ಲು ತೂರಾಟ ಮಾಡಿ, ಕಾರಿನ ಗ್ಲಾಸ್ ಒಡೆದು ಹಾಕಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ ಒಳನುಗ್ಗಿದ ಯುವಕರು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ವೇಳೆ ಪೊಲೀಸರು ಲಘು ಲಾಠಿ ಚಾರ್ಜ್ ಕೂಡ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದರು ಎನ್ನಲಾಗಿತ್ತು. ಈ ಕುರಿತಂತೆ ಗಾಯಕಿ ಮಂಗ್ಲಿ ಅವರೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.
’‘ತಮ್ಮ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎನ್ನುವ ಸುದ್ದಿಗೆ ಟ್ವಿಟರ್ನಲ್ಲಿ ಪೋಸ್ಟ್ ಹಾಕಿರುವ ಗಾಯಕಿ ಮಂಗ್ಲಿ ಇನ್ಸ್ಟಾಗ್ರಾಂನಲ್ಲಿ ಕನ್ನಡದಲ್ಲಿ ಬರೆದು ಸ್ಟೋರಿ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸ್ಪಷ್ಟನೆಯಲ್ಲಿ ತಮಗೆ ಕನ್ನಡಿಗರ ಮೇಲಿರುವ ಅಭಿಮಾನ ಹಾಗೂ ಕನ್ನಡಿಗರಿಗೆ ಅವರ ಮೇಲಿರುವ ಪ್ರೀತಿ ಅಭಿಮಾನಗಳ ಕುರಿತು ಮಾತನಾಡಿದ್ದಾರೆ.
ಟ್ವಿಟರ್ನಲ್ಲಿ ಸುದ್ದಿ ಸುಳ್ಳೆಂದು ತಳ್ಳಿಹಾಕಿದ ಖ್ಯಾತ ಗಾಯಕಿ:ಟ್ವಿಟರ್ ಪೋಸ್ಟ್ನಲ್ಲಿ ನಿನ್ನೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಮೇಲೆ ದಾಳಿ ನಡೆದಿದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳ ಗ್ರೂಪ್ಗಳು ಹಬ್ಬಿಸಿರುವ ಸುಳ್ಳು ಸುದ್ದಿಯನ್ನು ನಾನು ಸಂಪೂರ್ಣವಾಗಿ ತಳ್ಳಿ ಹಾಕುತ್ತೇನೆ. ನೀವೆಲ್ಲರೂ ಏನು ಫೋಟೋಗಳು ಹಾಗೂ ವಿಡಿಯೋಗಳಲ್ಲಿ ನೋಡುತ್ತಿದ್ದೀರಿ, ನಾನು ಭಾಗವಹಿಸಿದ್ದ ಕಾರ್ಯಕ್ರಮ ಬಹುದೊಡ್ಡ ಯಶಸ್ವಿ ಕಾರ್ಯಕ್ರಮವಾಗಿತ್ತು. ಬೆಸ್ಟ್ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಆ ಕಾರ್ಯಕ್ರಮದ ವೇಳೆ ಕನ್ನಡಿಗರು ನನ್ನ ಮೇಲೆ ತೋರಿಸಿದ ಅಪಾರವಾದ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ನಾನು ಚಿರಋಣಿ. ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಅದನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ಇಮೇಜ್ ಹಾಳು ಮಾಡಲು ಈ ರೀತಿ ಮಾಡಲಾಗಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಾನು ವಿರೋಧಿಸುತ್ತೇನೆ‘‘ ಎಂದು ವಿವರಿಸಿದ್ದಾರೆ.
ಗಾಯಕಿ ಮಂಗ್ಲಿ ಇನ್ಸ್ಟಾಗ್ರಾಂ ಸ್ಟೋರಿ
ಇನ್ಸ್ಟಾಗ್ರಾಂನಲ್ಲೂ ಮಂಗ್ಲಿ ಕೊಟ್ಟಿರುವ ಸ್ಪಷ್ಟನೆ ಹೀಗಿದೆ:ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಎಲ್ಲರಿಗೂ ನಮಸ್ಕಾರ, ’’ನಾನು ನಿಮ್ಮ ಮಂಗ್ಲಿ.. ಬಳ್ಳಾರಿಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ. ಆ ಘಟನೆ ನಡೆದ ಸಂದರ್ಭದಲ್ಲಿ, ಆ ಕಾರಿನಲ್ಲಿ ನಾನು ಕುಳಿತಿರಲಿಲ್ಲ.. ನಾನು ಗ್ರೀನ್ ರೂಮ್ನಲ್ಲಿ ಇದ್ದಾಗ ಒಂದು ಕಾರಿಗೆ ಯಾರೋ ಕಲ್ಲು ಎಸೆದಿದ್ದಾರೆ. ಆ ಕಲ್ಲು ಎಸೆದ ಘಟನೆಗೂ ನನಗೂ ಸಂಬಂಧವಿಲ್ಲ.. ಆ ಕಾರು ಕೂಡ ನನ್ನದಲ್ಲ. ನಾನು ಕ್ಷೇಮವಾಗಿದ್ದೇನೆ. ಕನ್ನಡಿಗರು ಹಿಂದಿನಿಂದಲೂ ನನಗೆ ಅಪಾರವಾದ ಪ್ರೀತಿ ಹಾಗೂ ಆಶೀರ್ವಾದ ನೀಡಿದ್ದಾರೆ. ಈಗಲೂ ಅಷ್ಟೇ ಪ್ರೀತಿ ಹಾಗೂ ಆಶೀರ್ವಾದ ನೀಡುತ್ತಿದ್ದಾರೆ. ನನಗೆ ಕನ್ನ ಮತ್ತು ಕನ್ನಡಿಗರೆಂದರೆ ಅಪಾರವಾದ ಗೌರವ ಹಾಗೂ ಅಭಿಮಾನ.. ಎಲ್ಲಾ ಸಮಸ್ತ ಕನ್ನಡಿಗರ ಪ್ರೀತಿಗೆ ನಾನು ಸದಾ ಚಿರಋಣಿ‘‘ಎಂದು ಕನ್ನಡದಲ್ಲೇ ಬರೆದು ಹಾಕಿದ್ದಾರೆ.
ಇದನ್ನೂ ಓದಿ:ಬಳ್ಳಾರಿ ಉತ್ಸವ: ಗಾಯಕಿ ಮಂಗ್ಲಿ ಕಾರಿಗೆ ಕಲ್ಲು, ಗ್ಲಾಸ್ ಒಡೆದು ಹಾಕಿದ ಪುಂಡರು!