ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಸ್ಟಾರ್ ಗಾಯಕ ಅರಿಜಿತ್ ಸಿಂಗ್ ನಡುವಿನ ಒಂಭತ್ತು ವರ್ಷಗಳ ಮನಸ್ತಾಪ ಅಂತ್ಯ ಕಾಣುವ ಹೊತ್ತು ಬಂದಂತೆ ತೋರುತ್ತಿದೆ. ಸಲ್ಮಾನ್ ಖಾನ್ ಮನೆ ಬಳಿ ಅರಿಜಿತ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಮನಸ್ತಾಪಕ್ಕೆ ಫುಲ್ ಸ್ಟಾಪ್ ಇಡುವ ಹೊತ್ತು ಬಂದಿದೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.
ಪ್ರೀತಿ ಗೆದ್ದಿದೆ... ಸಲ್ಮಾನ್ ಖಾನ್ ಸಿನಿಮಾ ಕ್ಷೇತ್ರದ ಸಾಧಕ. ಅರಿಜಿತ್ ಸಿಂಗ್ ತಮ್ಮ ಮ್ಯಾಜಿಕಲ್ ವಾಯ್ಸ್ ಮೂಲಕವೇ ಅಭಿಮಾನಿಗಳ ಮನ ಸೆಳೆಯುವ ಸ್ಟಾರ್ ಸಿಂಗರ್. ಇಬ್ಬರೂ ಮನರಂಜನಾ ಕ್ಷೇತ್ರದ ದಿಗ್ಗಜರೇ. ಆದರೆ 2014ರಲ್ಲಿ ಕೆಲ ವಿಷಯಗಳ ಹಿನ್ನೆಲೆ, ಸಲ್ಮಾನ್ ಮತ್ತು ಅರಿಜಿತ್ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಗಳು ತಿಳಿಸಿತ್ತು. ಇದೀಗ ಮನಸ್ತಾಪ ಕೊನೆಗೊಂಡು ಪ್ರೀತಿ ಗೆದ್ದಿದೆ ಅಂತಾರೆ ಅಭಿಮಾನಿಗಳು.
2014ರಲ್ಲಿ ಮನಸ್ತಾಪ? ಕಾರ್ಯಕ್ರಮವೊಂದರಲ್ಲಿ ನಡೆದ ಮಾತಿನ ಚಕಮಕಿಯೇ ಮನಸ್ತಾಪಕ್ಕೆ ಕಾರಣ ಎನ್ನಲಾಗಿದೆ. 2014ರ ಬಳಿಕ ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಹಾಡುವ ಅವಕಾಶ ಅರಿಜಿತ್ ಸಿಂಗ್ ಅವರಿಗೆ ಸಿಕ್ಕಿಲ್ಲ. ಹೀಗೆ ವರ್ಷಗಳು ಕಳೆದಿದ್ದು, ಸದ್ಯ ಸಮಸ್ಯೆಗೆ ಫುಲ್ ಸ್ಟಾಪ್ ಇಡುವ ಹೊತ್ತು ಬಂದಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಅರಿಜಿತ್ ಸಿಂಗ್ ವಿಡಿಯೋ ವೈರಲ್: ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ ಮನೆಯಿಂದ ಗಾಯಕ ಅರಿಜಿತ್ ಸಿಂಗ್ ಅವರು ಕಾರಿನಲ್ಲಿ ನಿರ್ಗಮಿಸುತ್ತಿರುವುದನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಹಂಚಿಕೊಂಡ ಸೋಷಿಯಲ್ ಮೀಡಿಯಾ ಬಳಕೆದಾರ, ಸಲ್ಮಾನ್ ಖಾನ್ ಮನೆ ಬಳಿ ಅರಿಜಿತ್ ಸಿಂಗ್ ಕಾಣಿಸಿಕೊಂಡಿದ್ದಾರೆ, ಏನಾಗುತ್ತಿದೆ? ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಬಿಡುಗಡೆಗೆ ಸಜ್ಜಾಗಿರುವ ಬಹುನಿರೀಕ್ಷಿತ ಟೈಗರ್ 3ನಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರಾ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.