'ಸಜನಿ', 'ವೆಂಕಟ ಇನ್ ಸಂಕಟ', 'ನವಗ್ರಹ', 'ಕೃಷ್ಣ' ಮುಂತಾದ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿರುವ ನಟಿ ಶರ್ಮಿಳಾ ಮಾಂಡ್ರೆ. ಕನ್ನಡ ಮಾತ್ರವಲ್ಲದೇ ತಮಿಳು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿರುವ ಬ್ಯೂಟಿ ಈಗ ಅಭಿನಯದ ಜೊತೆಗೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ನಟನೆ ಮಾತ್ರ ಮಾಡುತ್ತಿದ್ದ ಶರ್ಮಿಳಾ ಇದೀಗ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ 'ಸಿಲ ನೋಡಿಗಳಿಲ್' ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
'ಮುಂದಿನ ನಿಲ್ದಾಣ' ಎಂಬ ಸೂಪರ್ಹಿಟ್ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಭಾರಧ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ ಅವರು, "ನಾಲ್ಕು ವರ್ಷಗಳ ಹಿಂದೆ ನಾನು ನಿರ್ದೇಶಿಸಿದ್ದ 'ಮುಂದಿನ ನಿಲ್ದಾಣ' ಚಿತ್ರ ತೆರೆಕಂಡು ಎಲ್ಲರ ಮೆಚ್ಚುಗೆ ಗಳಿಸಿತು. ಈಗ 'ಸಿಲ ನೋಡಿಗಳಿಲ್' ಚಿತ್ರ ನನಗೆ ಸಿಗಲು 'ಲೂಸಿಯಾ' ಪವನ್ ಕುಮಾರ್ ಕಾರಣ. ಅವರ ಮೂಲಕ ನನಗೆ ಶರ್ಮಿಳಾ ಮಾಂಡ್ರೆ ಪರಿಚಯವಾಯಿತು. ಮಲೇಷಿಯಾದಲ್ಲಿ ಖ್ಯಾತ ಆರ್ ಜೆ ಆಗಿ ಕಾರ್ಯನಿರ್ವಹಿಸುತ್ತಿರುವ ಪುನ್ನಗೈ ಪೂ ಗೀತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಟನೆ ಕೂಡ ಮಾಡಿದ್ದಾರೆ" ಎಂದು ತಿಳಿಸಿದರು.
'ಸಿಲ ನೋಡಿಗಳಿಲ್' ತಮಿಳು ಚಿತ್ರಕ್ಕೆ ಪ್ರೊಡ್ಯೂಸರ್ ಆದ ನಟಿ ಶರ್ಮಿಳಾ ಮಾಂಡ್ರೆ ಇದನ್ನೂ ಓದಿ:ದೀಪಾವಳಿಗೆ 'ಪುಷ್ಪ 2' ಅಪ್ಡೇಟ್ ನೀಡಿದ ಅಲ್ಲು ಅರ್ಜುನ್; ಫ್ಯಾನ್ಸ್ ಫುಲ್ ಖುಷ್
"ಮೂರು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ರಿಚರ್ಡ್ ರಿಷಿ, ಪುನ್ನಗೈ ಪೂ ಗೀತಾ ಹಾಗೂ ಯಶಿಕಾ ಆನಂದ್ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ. ಲಂಡನ್ನಲ್ಲಿ ವಾಸವಿರುವ ಗಂಡ, ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಇದು ನಿಜವಾಗಿಯೂ ಕೊಲೆನಾ? ಎಂಬ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದಲ್ಲಿದೆ. 'ಸಿಲ ನೋಡಿಗಳಿಲ್' ಎಂದರೆ 'ಕೆಲವೇ ಕ್ಷಣಗಳಲಿ' ಎಂದರ್ಥ. ಐದು ಹಾಡುಗಳು ಈ ಚಿತ್ರದಲ್ಲಿದ್ದು, ಐದು ಖ್ಯಾತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹೆಸರಾಂತ ತಂತ್ರಜ್ಞರ ಕೈಚಳಕ ನಮ್ಮ ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲು ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿ ಬಿಡುಗಡೆಯಾಗುತ್ತಿದೆ. ನಂತರದ ದಿನಗಳಲ್ಲಿ ಕನ್ನಡದಲ್ಲಿಯೂ ನಿರ್ಮಿಸುವ ಯೋಜನೆ ಇದೆ" ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ, "ಗಾಳಿಪಟ 2 ಚಿತ್ರದ ನಂತರ ನಾನು ಪವನ್ ಕುಮಾರ್ ಅವರ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿದ್ದೆ. ಅವರು ಧೂಮಂ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ವಿನಯ್ ಅವರನ್ನು ಪರಿಚಯಿಸಿದರು. ಮುಂದಿನ ನಿಲ್ದಾಣ ಚಿತ್ರ ನೋಡಿದೆ. ವಿನಯ್ ಅವರ ನಿರ್ದೇಶನ ಇಷ್ಟವಾಯಿತು. ಈ ಚಿತ್ರವನ್ನು ವಿನಯ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ನಟಿಸಿಲ್ಲ. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ನಿರ್ಮಾಪಕರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನವೆಂಬರ್ 24 ರಂದು ಪ್ರಪಂಚದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬ: ಡ್ರೋನ್ ಮೂಲಕ ರಿವೀಲ್ ಆಯ್ತು 'ಕ್ಯಾಪ್ಚರ್' ಪೋಸ್ಟರ್