ಅಪಾರ ಸಂಖ್ಯೆ ವೀಕ್ಷಕರನ್ನು ಸಂಪಾದಿಸಿರುವ ಕನ್ನಡ ಕಿರುತೆರೆಯ ಜನಪ್ರಿಯ ಶೋ 'ವೀಕೆಂಡ್ ವಿತ್ ರಮೇಶ್'. ಸೀಸನ್ 5 ರಲ್ಲಿ ಈಗಾಗಲೇ 7 ಸಾಧಕರು ಬಂದಿದ್ದು, 8ನೆಯ ಅತಿಥಿಯಾಗಿ ನಟ, ನಿರ್ಮಾಪಕ, ಆಹಾರ ಪ್ರೇಮಿ ಸಿಹಿ ಕಹಿ ಚಂದ್ರು ಆಗಮಿಸಿದ್ದಾರೆ. ಸಾಧಕರ ಸೀಟ್ನಲ್ಲಿ ಕುಳಿತು ಬಾಲ್ಯ, ಶಿಕ್ಷಣ, ಉದ್ಯೋಗ, ಸಿನಿಮಾ, ಅಡುಗೆ ಕಾರ್ಯಕ್ರಮ, ಕುಟುಂಬ, ಸ್ನೇಹಿತರು ಹೀಗೆ ಹಲವು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಹಿರಿತೆರೆಯಲ್ಲಿ ವಿಶೇಷ ಸಾಧನೆಗೈದ ಸಿಹಿ ಕಹಿ ಚಂದ್ರು ತಮ್ಮ ಜೀವನದ ಕಥೆಯನ್ನು ತೆರೆದಿಟ್ಟಿದ್ದಾರೆ.
ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯ: ಸಿಹಿ ಕಹಿ ಚಂದ್ರು ಅವರು ಕಾಲೇಜು ದಿನಗಳಿಂದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹೀಗಾಗಿ ಅವರು ನಟನೆಯಲ್ಲಿ ಹೆಚ್ಚು ಆಸಕ್ತಿಯನ್ನು ಗಿಟ್ಟಿಸಿಕೊಂಡರು. ಬಾಲ್ಯದಿಂದಲೇ ಅವರಿಗೆ ಒಂದಿಪ್ಪತ್ತು ಮಂದಿಯ ಮುಂದೆ ಮೈಮ್ ಮಾಡಲು ಆಸಕ್ತಿಯಿತ್ತಂತೆ. ಅವರು ಈ ಮೈಮ್ ಮಾಡಿದ್ದರು. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ರಮೇಶ್ ಅವರು ಕೂಡ ಮೈಮ್ ಮಾಡಿ ತೋರಿಸಲು ಅವಕಾಶ ಮಾಡಿಕೊಟ್ಟರು. ಅವರ ಮೈಮ್ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ಮಾಡಿತು.
ನೂರು ರೂಪಾಯಿಯಲ್ಲಿ ಕರ್ನಾಟಕ ಸುತ್ತಿದ ಚಂದ್ರು: ಚಂದ್ರು ಅವರು ಒಬ್ಬರೇ ದ್ವಿತೀಯ ಪಿಯುಸಿಯಲ್ಲಿ ಇರಬೇಕಾದ್ರೆ ಕೇವಲ ನೂರು ರೂಪಾಯಿ ಇಟ್ಟುಕೊಂಡು ಇಡೀ ಕರ್ನಾಟಕವನ್ನು ಸುತ್ತಿದ್ದರಂತೆ. ಪಿಯುಸಿ ಮುಗಿದ ಮೇಲೆ ಟೆಕ್ಸ್ಟೈಲ್ ಇಂಜಿನಿಯರಿಂಗ್ ಮಾಡಬೇಕೆಂಬ ಆಸೆ ಅವರಿಗಿತ್ತು. ಆದರೆ ಅವರ ಅಪ್ಪ ಸೀಟ್ ಕೊಡಿಸಲಿಲ್ಲವಂತೆ. ಹೀಗಾಗಿ ಕೋಪದಲ್ಲಿ ಕೈಯಲ್ಲಿದ್ದ ನೂರು ರೂಪಾಯಿ ಇಟ್ಟುಕೊಂಡು ಇಡೀ ಕರ್ನಾಟಕ ಟೂರ್ ಮಾಡಿದ್ದರು. ಫ್ರೆಂಡ್ ಮನೆಗೆಲ್ಲಾ ಹೋಗಿ ಅಲ್ಲಿ ಊಟ ಮಾಡಿ ಅಲ್ಲೇ ಸುತ್ತಮುತ್ತ ಸುತ್ತಾಡಿಕೊಂಡು ವಾಪಸ್ ಮನೆಗೆ ಬಂದಿದ್ದರಂತೆ.