ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅಭಿಮಾನಿಗಳಿಗೆ ಸಂತಸದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಸಿಧು ಅವರ 'ಮೇರಾ ನಾಮ್' ಎಂಬ ಹೊಸ ಹಾಡು ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. ಅದರ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಈ ಹಾಡನ್ನು ಬರ್ನಾ ಬಾಯ್ ಮತ್ತು ಸ್ಟೀಲ್ ಬ್ಯಾಂಗಲ್ಸ್ ಹಾಡಿದ್ದಾರೆ. ಸಿಧು ತಂದೆ ಬಲ್ಕೌರ್ ಸಿಂಗ್ ಮತ್ತು ತಾಯಿ ಹಾಡಿನ ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಸಿಧು ಮೂಸೆವಾಲಾ ಅವರ ಯಾವುದೇ ಹೊಸ ಹಾಡುಗಳು ಬಿಡುಗಡೆಗೊಂಡಿರಲಿಲ್ಲ. ಹೀಗಾಗಿ ಸಿಧು ಅಭಿಮಾನಿಗಳು ಅವರ ಹಾಡಿಗಾಗಿ ಕಾಯುತ್ತಿದ್ದರು. ಅದರಂತೆ ಕೊನೆಗೂ ಹಾಡು ಬಿಡುಗಡೆಯ ಡೇಟ್ ಅನೌನ್ಸ್ ಆಗಿದೆ. ಸಿಧು ನಿಧನದ ನಂತರ ರಿಲೀಸ್ ಆಗುತ್ತಿರುವ ಅವರ ಮೂರನೆಯ ಸಾಂಗ್ ಇದಾಗಿದೆ. ಅವರ ಎರಡು ಹಾಡುಗಳು ಎಸ್ವೈಎಲ್ ಮತ್ತು ವಾರ್ ಈ ಹಿಂದೆ ಬಿಡುಗಡೆಯಾಗಿದೆ.
ಅಭಿಮಾನಿಗಳ ಖುಷಿಗಾಗಿ ಸಿಧು ಅಗಲಿಕೆ ನಂತರದ ಮೂರನೇ ಹಾಡು 'ಮೇರಾ ನಾಮ್' ಅನ್ನು ಅವರ ಪೋಷಕರೇ ಏಪ್ರಿಲ್ 7 ರಂದು ಬಿಡುಗಡೆಗೊಳಿಸಲಿದ್ದಾರೆ. ಸ್ಟೀಲ್ ಬ್ಯಾಂಗಲ್ಸ್ ಅವರು 2022ರ ನವೆಂಬರ್ ನಲ್ಲಿ ಯುಕೆಗೆ ಭೇಟಿ ನೀಡಿದ್ದಾಗ ಸಿಧು ಅವರ ಪೋಷಕರನ್ನು ಭೇಟಿಯಾಗಿದ್ದರು. ಬಳಿಕ ಸಿಧು ಪೋಷಕರು ಮತ್ತು ಬರ್ನಾ ಬಾಯ್ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಆಗಲೇ ಈ ಹೊಸ ಹಾಡಿನ ಬಗ್ಗೆ ಅವರು ಸುಳಿವು ನೀಡಿದ್ದರು.