ಬಾಲಿವುಡ್ ಬಹುಬೇಡಿಕೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನ ರಾಜ್ಯದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತಮ್ಮ ಪ್ರಿತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೇಸ್ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ಸಿದ್ಧಾರ್ಥ್ ಮತ್ತು ಕಿಯಾರಾ ಅವರ ವಿವಾಹ ಶಾಸ್ತ್ರಗಳು, ಕಾರ್ಯಕ್ರಮಗಳು ನಡೆದಿವೆ. ದಂಪತಿ ತಮ್ಮ ಕುಟುಂಬ ಸದಸ್ಯರೊಂದಿಗೆ ಫೆಬ್ರವರಿ 4ರಂದು ಜೈಸಲ್ಮೇರ್‌ಗೆ ತಲುಪಿ ವಿವಾಹ ಕಾರ್ಯಗಳಲ್ಲಿ ತೊಡಗಿಕೊಂಡರು. ಫೆಬ್ರವರಿ 6 ರಂದು (ಸೋಮವಾರ) ಮೆಹೆಂದಿ ಮತ್ತು ಸಂಗೀತ ಸಂಜೆ ಕಾರ್ಯಕ್ರಮಗಳು ನಡೆದರೆ, ಇಂದು ಮುಂಜಾನೆ ಹಳದಿ ಶಾಸ್ತ್ರ ನಡೆದಿದೆ. ಸಂಜೆ ವಿವಾಹ ಶಾಸ್ತ್ರ ಕೂಡ ಸುಸೂತ್ರವಾಗಿ ನೆರವೇರಿದೆ.
ವಧು ವರರು, ಕುಟುಂಬಸ್ಥರು ಮದುವೆಯ ಸ್ಥಳವನ್ನು ತಲುಪುವ ಮೊದಲೇ, ಹೆಚ್ಚಿನ ಭದ್ರತೆಯ ನಡುವೆಯೂ ಅತಿಥಿಗಳ ಆಗಮನ ಮತ್ತು ಸ್ಥಳದ ಹೊರಗಿನ ದೃಶ್ಯಗಳನ್ನು ಸೆರೆ ಹಿಡಿಯಲು ಪಾಪರಾಜಿಗಳು ನಾಲ್ಕೈದು ದಿನಗಳಿಂದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೇಸ್ ಹೋಟೆಲ್ ಬಳಿ ಇದ್ದಾರೆ. ಹೋಟೆಲ್ ಒಳಗೆ ಏನು ನಡೆಯುತ್ತಿದೆ ಎಂಬುದರ ಕುರಿತು ಮಾಧ್ಯಮಗಳು ಹೊರಗೆ ನಿಂತು ಆಪ್ತ ಮೂಲಗಳೊಂದಿಗೆ ಮಾಹಿತಿ ಕಲೆ ಹಾಕುತ್ತಿವೆ. ಹೋಟೆಲ್ ಹೊರಗಿನ ವಿಡಿಯೋ, ಮದುವೆಗೆ ನಡೆಯುತ್ತಿದ್ದ ಸಿದ್ಧತೆಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವ ದಂಪತಿಗಳ ಮದುವೆ ಫೋಟೋ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಮದುವೆಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಬಾಲಿವುಡ್‌ನ ಮೆಚ್ಚಿನ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದ ಉಡುಗೆಗಳನ್ನು ಧರಿಸಿದ್ದರು ಎನ್ನುವ ಮಾಹಿತಿ ಇದೆ. ಹೆಚ್ಚಿನ ಸೆಲೆಬ್ರಿಟಿ ವಧು ವರರು ತಮ್ಮ ಈ ವಿಶೇಷ ದಿನಕ್ಕಾಗಿ ಸಬ್ಯಸಾಚಿ ಬಟ್ಟೆಗಳನ್ನು ಆರಿಸಿಕೊಂಡರೆ, ಕಿಯಾರಾ ಅವರು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿರುವ ಉಡುಗೆ ಧರಿಸಿದ್ದರು. 2021ರಲ್ಲಿ ಅಂಕಿತಾ ಲೋಖಂಡೆ ಅವರು ತಮ್ಮ ಮದುವೆಗೆ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸದ ಉಡುಗೆ ಧರಿಸಿದ್ದ ಕೊನೆಯ ಪ್ರಸಿದ್ಧ ವಧು.