ನವದೆಹಲಿ:ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ನ ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೀಗ ಎಂಜಾಯ್ ಮೂಡ್ನಲ್ಲಿದ್ದಾರೆ. ಚಿತ್ರೀಕರಣದಿಂದ ಸ್ವಲ್ಪ ಬಿಡುವು ಮಾಡಿಕೊಂಡಿರುವ ಈ ಜೋಡಿ ಇದೀಗ ತಮ್ಮ ಮೌಲ್ಯಯುತ ಸಮಯ ಕಳೆಯಲು ಜಪಾನ್ಗೆ ಹಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಫಾನ್ಸ್ ಲೈಕ್ ಮತ್ತು ಕಾಮೆಂಟ್ ಮಾಡುವ ಮೂಲಕ ದಂಪತಿಗೆ ವಿಶ್ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಮತ್ತು ಕಿಯಾರಾ ಕ್ಯಾಶುಯಲ್ ಮತ್ತು ಆರಾಮದಾಯಕ ಟ್ರ್ಯಾಕ್‌ಸೂಟ್‌ಗಳನ್ನು ಧರಿಸಿರುವುದನ್ನು ಫೋಟೋದಲ್ಲಿ ನಾವು ಕಾಣಬಹುದು. ಸಿದ್ಧಾರ್ಥ್ ಕೆಲವು ಶಾಪಿಂಗ್ ಬ್ಯಾಗ್‌ಗಳನ್ನು ಹಿಡಿದಿರುವುದನ್ನು ನಾವು ನೋಡಬಹುದು. ಫೋಟೋ ಜೊತೆಗೆ ತಾರಾ ಜೋಡಿ ತಾಯಂದಿರ ದಿನದ ಶುಭಾಶಯಗಳು ಎಂದು ಶೀರ್ಷಿಕೆ ಬರೆದಿದ್ದಾರೆ. ಜೊತೆ ಜೊತೆಯಾಗಿ ಕೈ-ಕೈ ಹಿಡಿದುಕೊಂಡು ಮಾಲ್ನಲ್ಲಿ ಓಡಾಡುತ್ತಿರುವ ಫೋಟೋ ನೋಡಿ ಅಭಿಮಾನಿಗಳು 'ಎಷ್ಟು ಮುದ್ದಾಗಿದೆ ನಿಮ್ಮ ಜೋಡಿ' ಎಂದು ಕಾಮೆಂಟ್ ಮಾಡುವ ಮೂಲಕ ಹಾಡಿ ಹೊಗಳುತ್ತಿದ್ದಾರೆ.
ತನ್ನ ತಾಯಿಯೊಂದಿಗೆ ತನ್ನ ಫೋಟೋವನ್ನು ಹಂಚಿಕೊಂಡಿರುವ ಕಿಯಾರಾ ಅಡ್ವಾಣಿ, ನನಗೆ ನನ್ನ ತಾಯಿ ಎಲ್ಲವೂ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಕ್ರೀಮ್ ಲೆಹೆಂಗಾ ಮತ್ತು ಹಳದಿ ದುಪ್ಪಟ್ಟಾ ಧರಿಸಿರುವ ಕಿಯಾರಾ, ತನ್ನ ತಾಯಿಯನ್ನು ತಬ್ಬಿಕೊಂಡುರುವುದನ್ನು ಕಾಣಬಹುದು. ಇದೇ ವೇಳೆ ಕಿಯಾರಾ ತಮ್ಮ ಅತ್ತೆಯೊಂದಿಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ ಕೂಡ ತಮ್ಮ ತಾಯಿಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಫೆಬ್ರವರಿ 7 ರಂದು ರಾಜಸ್ಥಾನದ ಸೂರ್ಯಗಢ ಅರಮನೆಯಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಾಹ ಕಾರ್ಯಕ್ರಮದ ಬಳಿಕ ತಮ್ಮ ಆಪ್ತ ಸ್ನೇಹಿತರಿಗಾಗಿ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ಕರಣ್ ಜೋಹರ್, ಕರೀನಾ ಕಪೂರ್ ಖಾನ್, ಆಲಿಯಾ ಭಟ್, ಕಾಜೋಲ್, ಗೌರಿ ಖಾನ್, ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಅನೇಕ ನಟ-ನಟಿಯರು ಹಾಗೂ ಗಣ್ಯರು ಅದ್ಧೂರಿಯಾಗಿ ನಡೆದ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಮದುವೆಗೂ ಮುನ್ನ ಈ ಜೋಡಿ 2021ರಲ್ಲಿ ಬಿಡುಗಡೆಯಾದ 'ಶೆರ್ಷಾ' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಡೇಟಿಂಗ್ ಆರಂಭಿಸಿದ್ದರು.
ಇದನ್ನೂ ಓದಿ:ಇದು ನನ್ನ ಕೊನೆಯ ಚಿತ್ರ ಅಂತಾನೇ ನಾನು ಕೆಲಸ ಮಾಡುವುದು: ಕೇರಳ ಸ್ಟೋರಿ ಸ್ಟಾರ್ ಅದಾ ಶರ್ಮಾ