ಬಿ-ಟೌನ್ ನವ ದಂಪತಿಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮಂಗಳವಾರ ತಡರಾತ್ರಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ. ಬಾಲಿವುಡ್ ಚಿತ್ರರಂಗದ ಬಹು ಬೇಡಿಕೆ ತಾರಾ ದಂಪತಿಯ ಹೊಸ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಫೆಬ್ರವರಿ 7ರಂದು ರಾಜಸ್ಥಾನ ರಾಜ್ಯದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೆಸ್ ಹೋಟೆಲ್‌ನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಅವರ ಮದುವೆ ಸಮಾರಂಭ ನಡೆಯಿತು. ವಿವಾಹ ಶಾಸ್ತ್ರಗಳೆಲ್ಲವೂ ಪೂರ್ಣಗೊಳ್ಳುವವರೆಗೂ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಕೂಡ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಕಳೆದ ಹಲವು ದಿನಗಳಿಂದ ಈ ಬಹುಬೇಡಿಕೆ ತಾರೆಯರ ಮದುವೆ ಬಗ್ಗೆ ಸದ್ದಾಗುತ್ತಿತ್ತು. ಅದರಂತೆ ಫೆಬ್ರವರಿ 7ರಂದು ದಾಂಪತ್ಯ ಜೀವನ ಕೂಡ ಆರಂಭಿಸಿದರು. ಮದುವೆಯಾಗುತ್ತಿದ್ದಂತೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಪ್ರೀತಿ ಬಗ್ಗೆ ಖಚಿತಪಡಿಸಿದರು. ಹಂತ ಹಂತವಾಗಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಈ ಜೋಡಿ ನಿನ್ನೆ ರಾತ್ರಿ ಕೂಡ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಅವುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಅಭಿಮಾನಿಗಳು ಸಂಗೀತ ಸಮಾರಂಭದ ಚಿತ್ರಗಳು ಎಂದು ಊಹಿಸಿದ್ದಾರೆ. ಆದರೆ, ನಟ ನಟಿ ಫೋಟೋ ಶೀರ್ಷಿಕೆಯಲ್ಲಿ ಇದನ್ನು ಉಲ್ಲೇಖಿಸಿಲ್ಲ. ತಮ್ಮ ವಿಶೇಷ ಕ್ಷಣಗಳು ಎಂದಷ್ಟೇ ಬರೆದುಕೊಂಡಿದ್ದಾರೆ. ಬಾಲಿವುಡ್ನ ಮೆಚ್ಚಿನ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸುಂದರ ವಸ್ತ್ರದಲ್ಲಿ ಈ ಜೋಡಿ ಮಿಂಚಿದ್ದಾರೆ. ನಟಿ ಕಿಯಾರಾ ಅಡ್ವಾಣಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಫೈಯರ್ ಇಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ. ಚಿತ್ರರಂಗದ ಹಲವರು ಸೇರಿದಂತೆ ಅಭಿಮಾನಿಗಳು ಈ ಫೋಟೋ ಮೆಚ್ಚಿಕೊಂಡು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.