ಕಳೆದ 47 ವರ್ಷಗಳಿಂದ ಕನ್ನಡ ಸಿನಿಮಾರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯೇ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುದೀರ್ಘಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪದ್ಧತಿ ಆರಂಭಿಸಿದ್ದರು.
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ:ಕೇವಲ ಎರಡು ಪ್ರಶಸ್ತಿಗಳಿಂದ ಇಂಥದ್ದೊಂದು ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾದ ಇತಿಹಾಸವಿದೆ. ಹೀಗೆ ಆರಂಭವಾದ ಸಮಾರಂಭವೀಗ 11 ಹಾಗು ಮೂರು ವಿಶೇಷ ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಮಾತ್ರವಲ್ಲದೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಗೆ ಆಯ್ಕೆಯಾದ ಗಣ್ಯರು:ಪಿ.ಧನರಾಜ್ - ಹಿರಿಯ ಚಲನಚಿತ್ರ ನಿರ್ಮಾಪಕರು, ಈಶ್ವರ ದೈತೋಟ - ಹಿರಿಯ ಪತ್ರಕರ್ತರು, ನಟ ಕುಮಾರ್ ಗೋವಿಂದ್, ಹಿರಿಯ ಪತ್ರಕರ್ತ ಸದಾಶಿವ ಶೆಣೈ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್, ಹಿರಿಯ ನಟಿ ತುಳಸಿ, ಸಂಗೀತ ನಿರ್ದೇಶಕ ನೋಬಿನ್ ಪಾಲ್, ನಿರ್ದೇಶಕ ಮಧುಚಂದ್ರ, ಶ್ರೀನಿವಾಸ ಕಲ್ಯಾಣ ನಿರ್ದೇಶಕ ಎಂ.ಜಿ. ಶ್ರೀನಿವಾಸ್ , 777 ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್, ಗೀತ ರಚನೆಕಾರ ಪ್ರಮೋದ್, ಹಿರಿಯ ಪೋಷಕ ನಟ ಶ್ರೀನಿವಾಸಮೂರ್ತಿ.
ಮೂರು ವಿಶೇಷ ಪ್ರಶಸ್ತಿ: ಈ ಬಾರಿ ಇನ್ನೂ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. 2022ರಲ್ಲಿ ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರಗಳೆಂದರೆ 'ಕೆಜಿಎಫ್ 2' ಮತ್ತು 'ಕಾಂತಾರ'. ಈ ಎರಡೂ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.