ಹಲವು ಸೂಪರ್ಹಿಟ್ ಸಿನಿಮಾಗಳ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಇನ್ನಿಲ್ಲ. ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅವರ ಮೃತದೇಹ ಬುಧವಾರ ಮುಂಜಾನೆ ಅವರ ಎನ್ಡಿ ಸ್ಟುಡಿಯೋದಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ಚುರುಕು.. ಕರ್ಜಾತ್ ಪೊಲೀಸರು ತನಿಖೆ ಸಲುವಾಗಿ ಮುಂಜಾನೆ ಅವರ ಸ್ಟುಡಿಯೋಗೆ ಧಾವಿಸಿದರು. ಆತ್ಮಹತ್ಯೆ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆ ಚುರುಕುಗೊಂಡಿದೆ. ಈ ಸುದ್ದಿ ಚಿತ್ರರಂಗದವರೂ ಸೇರಿದಂತೆ ಪ್ರೇಕ್ಷಕರಿಗೆ ಆಘಾತವನ್ನುಂಟು ಮಾಡಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಲಾಗುತ್ತಿದೆ.
ಟ್ವಿಟರ್ನಲ್ಲಿ ಸಂತಾಪ.. ದೇಸಾಯಿ ಅವರು ಭಾನುವಾರ (ಆಗಸ್ಟ್ 6) ತಮ್ಮ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವವರಿದ್ದರು. ದುರಾದೃಷ್ಟವಶಾತ್ ಅದಕ್ಕೂ ಮುನ್ನ ಕೊನೆಯುಸಿರೆಳೆದಿದ್ದಾರೆ. ಅವರ ಅಕಾಲಿಕ ಮರಣಕ್ಕೆ ನೆಟಿಜನ್ಗಳು ಸಂತಾಪ ಸೂಚಿಸುತ್ತಿದ್ದಾರೆ.
'ಹೃದಯವಿದ್ರಾವಕ ಸುದ್ದಿ ಸ್ವೀಕರಿಸಲು ಸಾಧ್ಯವಿಲ್ಲ'.. ಟ್ವಿಟರ್ನಲ್ಲಿ ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಪ್ರತಿಕ್ರಿಯಿಸಿ, "ಹೃದಯವಿದ್ರಾವಕ ಸುದ್ದಿ ಸ್ವೀಕರಿಸಲು ಸಾಧ್ಯವಿಲ್ಲ. ನಮ್ಮ ಪ್ರೀತಿಯ ನಿತಿನ್ ದೇಸಾಯಿ ಅವರು ತಮ್ಮ ಸ್ವರ್ಗಕ್ಕೆ ತೆರಳಿದ್ದಾರೆ. ಅವರೊಬ್ಬ ಸರಳ ಮೇಧಾವಿ ವ್ಯಕ್ತಿಯಾಗಿದ್ದರು. ಕಲೆ ಮಾತ್ರವಲ್ಲದೇ ಜನರನ್ನೂ ಅರ್ಥ ಮಾಡಿಕೊಳ್ಳುವ ಕಲಾವಿದ. ಎಲ್ಲರಿಗೂ ಪ್ರೀತಿಯನ್ನು ಹರಡುವ ಸಕಾರಾತ್ಮಕ ಆತ್ಮವಾಗಿದ್ದರು. ದೇವರು ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ, ಓಂ ಶಾಂತಿ'' ಎಂದು ಬರೆದಿದ್ದಾರೆ.