ಬೆಂಗಳೂರು:ನಟ ಶಿವರಾಜ್ ಕುಮಾರ್ ಪತ್ನಿ ಸಮೇತರಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಯಾವ ವಿಷಯದ ಕುರಿತ ಮಾತುಕತೆ ನಡೆಸಿದ್ದಾರೆ ಎನ್ನುವುದು ನಿಗೂಢವಾಗಿದ್ದು, ಸದ್ಯಕ್ಕೆ ಸಿನಿರಂಗ ಮತ್ತು ರಾಜಕೀಯ ರಂಗದಲ್ಲಿ ಕುತೂಹಲ ಮೂಡುವಂತೆ ಮಾಡಿದೆ.
ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ ಇಂದು ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಆದರೆ, ಯಾವ ಉದ್ದೇಶದಿಂದ ಈ ಭೇಟಿಯಾಗಿದೆ ಎನ್ನುವುದು ನಿಗೂಢವಾಗಿದೆ. ಸಿಎಂ ಕಚೇರಿಯಾಗಲಿ, ಶಿವರಾಜ್ ಕುಮಾರ್ ದಂಪತಿಯಾಗಲಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ. ಈ ಭೇಟಿ ಕುರಿತು ಮಾತನಾಡಲೂ ಇಲ್ಲ, ಫೋಟೋ, ವಿಡಿಯೋಗೂ ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ ಇಂದಿನ ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕುತೂಹಲ ಮೂಡಿಸಿದ ಭೇಟಿ:ಚುನಾವಣೆ ಸಮೀಪದಲ್ಲಿ ರಾಜಕಾರಣಿಗಳ ನಿವಾಸಕ್ಕೆ ಸಿನಿಮಾ ತಾರೆಯರ ಭೇಟಿ ಸಹಜವಾಗಿರುತ್ತದೆ. ಆದರೆ, ಶಿವರಾಜ್ ಕುಮಾರ್ ದಂಪತಿ ಭೇಟಿ ರಾಜಕೀಯ ಕಾರಣಕ್ಕಾಗಿ ಇರಬಹುದು ಎಂದು ಒಂದು ಕಡೆ ಸಿನಿಮಾ ಕಾರಣ ಇರಬಹುದು ಎಂದು ಮತ್ತೊಂದು ಕಡೆ ಕೇಳಿಬರುತ್ತಿದೆ. ರಾಜಕೀಯ ಕಾರಣವಾಗಿ ನೋಡುವುದಾದರೆ ಡಾ.ರಾಜ್ ಕುಮಾರ್ ಕುಟುಂಬ ರಾಜಕೀಯದಿಂದ ದೂರವೇ ಇದೆ. ಆದರೆ, ಮಾಜಿ ಸಿಎಂ ಬಂಗಾರಪ್ಪ ಪುತ್ರಿಯಾಗಿರುವ ಗೀತಾ ಶಿವರಾಜ್ ಕುಮಾರ್ ಸಹೋದರ ಮಧು ಬಂಗಾರಪ್ಪ ಒತ್ತಡಕ್ಕೆ ಮಣಿದು 2014 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ನಂತರ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಇದೀಗ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು, ಗೀತಾ ಶಿವರಾಜ್ ಕುಮಾರ್ ಅವರನ್ನೂ ಕಾಂಗ್ರೆಸ್ಗೆ ಸೇರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಶಿವಕುಮಾರ್ ಕುಮಾರ್ ಅವರನ್ನು ಪ್ರಚಾರಕ್ಕೆ ಆಹ್ವಾನಿಸುವ ಕುರಿತ ಮಾತುಗಳು ಕೇಳಿಬರುತ್ತಿವೆ. ಆದರೆ, ಕಾಂಗ್ರೆಸ್ ಸಂಪರ್ಕದಲ್ಲಿರುವ ಮತ್ತು ಮಧು ಬಂಗಾರಪ್ಪ ಪರವೇ ಇರುವ ಗೀತಾ ಶಿವರಾಜ್ ಕುಮಾರ್ ಬಿಜೆಪಿ ಪರ ನಿಲ್ಲುವುದು ಅಸಾಧ್ಯ ಎನ್ನುವ ಮಾತುಗಳು ಕೇಳಿಬರುತ್ತಿವೆ.