ರಾಯಚೂರು: ನಟ ಶಿವರಾಜ್ಕುಮಾರ್ ಅಭಿನಯದ 125ನೇ ಸಿನಿಮಾ 'ವೇದ'ದ 2ನೇ ಟೀಸರ್ ಅನ್ನು ರಾಯಚೂರಿನಲ್ಲಿ ಬಿಡುಗಡೆ ಮಾಡಲಾಯಿತು. ಶನಿವಾರ ಸಂಜೆ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 'ವೇದ ಸಂಭ್ರಮ' ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಇದಕ್ಕೂ ಮೊದಲು ಅರ್ಜುನ್ ಜನ್ಯ ಹಾಗು ತಂಡದಿಂದ ಸಂಗೀತ ಕಾರ್ಯಕ್ರಮವಿತ್ತು. 36 ವರ್ಷದ ಸಿನಿಜರ್ನಿಯಲ್ಲಿ ಇದೇ ಮೊದಲ ಬಾರಿಗೆ ಶಿವರಾಜ್ಕುಮಾರ್ ರಾಯಚೂರಿಗೆ ಆಗಮಿಸಿದ್ದರು. ನಿರ್ದೇಶಕ ಹರ್ಷ ಸೇರಿ ಚಿತ್ರತಂಡದ ಹಲವರು ಉಪಸ್ಥಿತರಿದ್ದರು. ಸುಮಾರು 10,000ಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಈ ಸಂದರ್ಭದಲ್ಲಿ ಶಿವಣ್ಣನನ್ನು ಸನ್ಮಾನಿಸಿ ಬೆಳ್ಳಿಯ ಗದೆ ನೀಡಲಾಯಿತು. ಶಿವಣ್ಣ ರಾಯರ ಹಾಡು ಹಾಡಿದರು. ನಂತರ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
'ವೇದ' ಟೀಸರ್ ರಿಲೀಸ್ ಕಾರ್ಯಕ್ರಮ ಕಲ್ಯಾಣ ಕರ್ನಾಟಕ ಹಾಗೂ ರಾಯಚೂರು ಜಿಲ್ಲೆಯ ಸಾರ್ವಜನಿಕ ಹಿತಾಸಕ್ತಿಗೆ ನಡೆಯುವ ಹೋರಾಟಕ್ಕೆ ಸಿನಿತಾರೆಯರ ಬೆಂಬಲ ಸಿಗುತ್ತಿಲ್ಲ, ಅವರ ಬೆಂಬಲ ಕೆಲವೇ ಭಾಗಕ್ಕೆ ಸೀಮಿತವಾಗಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಣ್ಣ, ರಾಜ್ಯದ ಯಾವುದೇ ಸಮಸ್ಯೆ ಇರಲಿ ಎಲ್ಲಾ ಕಲಾವಿದರು ನಿಮ್ಮ ಜೊತೆಗೆ ಇರುತ್ತಾರೆ. ಈ ಭಾಗದ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ರಾಯಚೂರು ಕಡೆ ಬರುವುದಾಗಿ ಭರವಸೆ ನೀಡಿದರು. ಅಲ್ಲದೇ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕು ಎನ್ನುವ ಹೋರಾಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಾಗಿಯೂ ಭರವಸೆ ಕೊಟ್ಟರು.
ಇದನ್ನೂ ಓದಿ:ಶಿವ ರಾಜ್ಕುಮಾರ್ ನಟನೆಯ 125ನೇ ಚಿತ್ರ ವೇದ ಟೀಸರ್ ಔಟ್
ಕಾರ್ಯಕ್ರಮದಲ್ಲಿ ಚಿತ್ರನಟಿ ಸ್ವಾಮೀ ಜೆ.ಗೌಡ, ಸುರಪುರ ಶಾಸಕ ರಾಜುಗೌಡ, ಶಾಸಕರಾದ ಡಾ. ಶಿವರಾಜ್ ಪಾಟೀಲ್, ಬಸವನಗೌಡ ದದ್ದಲ್, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ್, ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್, ಸಿಇಒ ಶಶಿಧರ್ ಕುರೇರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ:ನಟ ಶಿವ ರಾಜ್ಕುಮಾರ್ ಕೆನ್ನೆಗೆ ಮುತ್ತಿಟ್ಟ ಅಭಿಮಾನಿ