ಶಿವ ರಾಜ್‌ಕುಮಾರ್ ಗ್ಯಾಂಗ್ಸ್ಟರ್ ಆಗಿ ಅಭಿನಯಿಸಿರುವ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಘೋಸ್ಟ್'. ಅಕ್ಟೋಬರ್ 19ರಂದು ವಿಶ್ವಾದ್ಯಂತ ತೆರೆ ಕಾಣಲು ಸಜ್ಜಾಗಿರುವ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.
ಟೀಸರ್ನಿಂದಲೇ ಹೊಸ ಬಗೆಯ ಕ್ರೇಜ್ ಕ್ರಿಯೇಟ್ ಮಾಡಿರುವ ಘೋಸ್ಟ್ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಕರುನಾಡ ಚಕ್ರವರ್ತಿ ಶಿವಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ, ನಿರ್ದೇಶಕ ಶ್ರೀನಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ಪ್ರೀ ಬ್ಯುಸಿನೆಸ್ ಜೋರಾಗಿದೆ. ಅಕ್ಟೋಬರ್ ಮೊದಲ ವಾರ ಘೋಸ್ಟ್ ಚಿತ್ರದ ಪ್ರಚಾರಕ್ಕಾಗಿ ಶಿವಣ್ಣ ಮುಂಬೈ, ದೆಹಲಿ ಮುಂತಾದೆಡೆ ತೆರಳಲಿದ್ದಾರೆ.
ಅದಕ್ಕೂ ಮುನ್ನ ಇಂದು ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು, ಖಡಕ್ ಡೈಲಾಗ್ಗಳಿಂದಲೇ ತುಂಬಿರುವ ಘೋಸ್ಟ್ ಟ್ರೇಲರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಶಿವ ರಾಜ್‌ಕುಮಾರ್ ಹೊಸ ಗೆಟಪ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಜಿ ಲುಕ್ ಮಾತ್ರವಲ್ಲದೇ, ಚಿರ ಯುವಕನಂತೆ ಕಾಣುವ ಶಿವಣ್ಣನ ದೃಶ್ಯಗಳು ಟ್ರೇಲರ್ನ ಹೈಲೈಟ್. 'ಇತಿಹಾಸ ಬರೆಯೋದೇ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದು ಸಾಲೂ ಬರೆಯೋದಿಲ್ಲ' ಎಂಬ ಡೈಲಾಗ್ ಅಂತೂ ಸಖತ್ ಟ್ರೆಂಡಿಂಗ್ ಆಗುತ್ತಿದೆ.
ಅದರಲ್ಲೂ ಟ್ರೇಲರ್ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ರಮುಖ ಆಕರ್ಷಣೆ ಅಂತಲೇ ಹೇಳಬಹುದು. ಇದರಲ್ಲಿ ಬರುವ ಒಂದೊಂದು ಡೈಲಾಗ್ಗಳು ಕೂಡ ಸಖತ್ ಪಂಚಿಂಗ್ ಆಗಿದೆ. ದೃಶ್ಯಗಳು ಕಣ್ಣಿಗೆ ಕಟ್ಟುವಂತಿದೆ. ಶಿವಣ್ಣ ಹಳೆಯ ಸಿನಿಮಾಗಳ ಲುಕ್ನಲ್ಲೂ ಕಾಣಿಸಿಕೊಂಡಿರುವುದು ವಿಶೇಷ. ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ಮಾಲಿವುಡ್ ನಟ ಜಯರಾಮ್ ಅವರನ್ನು ಕೂಡ ಟ್ರೇಲರ್ನಲ್ಲಿ ತೋರಿಸಲಾಗಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
#AskNimmaShivanna ಸೆಷನ್: 'ಘೋಸ್ಟ್' ಸಿನಿಮಾದ ಪ್ರಚಾರವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ. ಅದರ ಭಾಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಎಕ್ಸ್ನಲ್ಲಿ #AskNimmaShivanna ಸೆಷನ್ ನಡೆಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಶ್ನೆಗಳಿಗೆ ಶಿವಣ್ಣ ತುಂಬಾ ಸೂಕ್ತವಾದ ಉತ್ತರಗಳನ್ನು ನೀಡಿದ್ದಾರೆ.
ಚಿತ್ರತಂಡ: ನಿರ್ದೇಶಕ ಶ್ರೀನಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ 'ಘೋಸ್ಟ್' ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳಿವೆ. ಬಾಲಿವುಡ್ ನಟ ಅನುಪಮ್ ಖೇರ್, ಮಾಲಿವುಡ್ ನಟ ಜಯರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಅರ್ಚನಾ ಜೋಯಿಸ್ ಮುಂತಾದವರು ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುತ್ತಿರುವ ಸಿನಿಮಾಗೆ ಸಂದೇಶ್ ಎನ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ:ಸರ್ಪ್ರೈಸ್! 'ಘೋಸ್ಟ್' ಕುರಿತು ವಿಡಿಯೋ ಕಾಲ್ನಲ್ಲಿ ಅನುಪಮ್ ಖೇರ್- ಶಿವಣ್ಣ ಮಾತುಕತೆ