ತೋತಾಪುರಿ. ಇದು ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಕೆಲವು ಡೈಲಾಗ್‌ಗಳ ಕಾರಣಗಳಿಗೆ ಹುಬ್ಬೇರಿಸಿದ ಸಿನಿಮಾ. ನವರಸ ನಾಯಕ ಜಗ್ಗೇಶ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್ ಹಾಗು ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿದ್ದ ಸಿನಿಮಾ 'ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು' ಎನ್ನುವ ಸಂದೇಶ ಸಾರಿತ್ತು. ಇದರ ಮುಂದುವರಿದ ಭಾಗವಾಗಿ ತೋತಾಪುರಿ 2 ಚಿತ್ರ ಬರ್ತಿದೆ. ತೋತಾಪುರಿ ಎರಡನೇ ಭಾಗ ಮಾಡುತ್ತಿರುವುದಾಗಿ ನಿರ್ದೇಶಕ ವಿಜಯ ಪ್ರಸಾದ್ ಈ ಮೊದಲೇ ಸೂಚನೆ ನೀಡಿದ್ದರು. ಅದರಂತೆ ತೋತಾಪುರಿ ಭಾಗ 2 ನಿರ್ಮಾಣವಾಗಿದೆ. ಚಿತ್ರಕ್ಕೆ ನಟ ಶಿವ ರಾಜ್‌ಕುಮಾರ್ ಸಾಥ್ ಸಿಕ್ಕಿದೆ.
ತೋತಾಪುರಿ 2 ಚಿತ್ರದ ಟ್ರೇಲರ್ ಅನ್ನು ಶಿವ ರಾಜ್‌ಕುಮಾರ್ ಅನಾವರಣ ಮಾಡಿದ್ದಾರೆ. "ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಜಗ್ಗೇಶ್ ಹಾಗು ಧನಂಜಯ್ ಕಾಂಬಿನೇಷನ್ ಅದ್ಭುತವಾಗಿದೆ. ಸುರೇಶ್ ಪ್ರೊಡಕ್ಷನ್ ಸಂಸ್ಥೆ ನಮ್ಮ ಸಂಸ್ಥೆಯಂತೆ. ಈ ಸಿನಿಮಾ ಸುರೇಶ್ಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಡಲಿ" ಎಂದು ಶಿವ ರಾಜ್‌ಕುಮಾರ್ ಹರಸಿದರು.
ರಿವೀಲ್ ಆಗಿರುವ ಟ್ರೇಲರ್ನಲ್ಲಿ ಧನಂಜಯ್, ಸುಮನ್ ರಂಗನಾಥ್ ಲವ್ ಸ್ಟೋರಿ ನೋಡುಗರನ್ನು ಇಂಪ್ರೆಸ್ ಮಾಡುವಂತಿದೆ. ಜಗ್ಗೇಶ್ ಮುಸ್ಲಿಂ ಹುಡುಗಿಯನ್ನು ಒಲಿಸಿಕೊಳ್ಳಲು ಮಾಡುವ ಸರ್ಕಸ್ ನಗು ತರಿಸುತ್ತೆ. ನಿರ್ಮಾಪಕ ಕೆ. ಎ. ಸುರೇಶ್ ಹೇಳುವಂತೆ ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್ ಇದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಕಾಮಿಡಿ ಪಂಚಿಂಗ್ ಅನ್ನು ಸಿನಿಮಾ ನೀಡಲಿದೆ. ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಹೀಗೆ ದೊಡ್ಡ ತಾರಾ ಬಳವೇ ಇದೆ. ನಿರ್ಮಾಪಕ ಸುರೇಶ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.