ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಹಾಯ್ ನಾನ್ನ' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಮೋಷನಲ್ ಕಥಾಹಂದರಕ್ಕೆ ಸಿನಿಪ್ರಿಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ ಶಿವರಾಜ್ಕುಮಾರ್ ಕೂಡ ನಾನಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿ ಸಿನಿಮಾ ವೀಕ್ಷಿಸಿದ ಶಿವಣ್ಣ: ಕೆಲ ದಿನಗಳ ಹಿಂದೆ 'ಹಾಯ್ ನಾನ್ನ' ಪ್ರಚಾರದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ನಾನಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಶಿವಣ್ಣ ಈ ಚಿತ್ರ ವೀಕ್ಷಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಎಮೋಷನಲ್ ಸಿನಿಮಾ.. ಸಿನಿಪ್ರಿಯರಿಂದ ಮೆಚ್ಚುಗೆ ಸ್ವೀಕರಿಸಿರುವ ಹಾಯ್ ನಾನ್ನ ಸಿನಿಮಾ ನೋಡಿ ಮಾತನಾಡಿದ ನಟ ಶಿವ ರಾಜ್ಕುಮಾರ್, ಬಹಳ ಅದ್ಭುತ ಸಿನಿಮಾ. ಎಮೋಷನ್ ಆಗಿ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದವರಿಗೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಸಿನಿಮಾ ಬೇಗ ಕನೆಕ್ಟ್ ಆಯ್ತು. ಮ್ಯೂಸಿಕ್ ಕೂಡ ಬಹಳ ಚೆನ್ನಾಗಿದೆ. ನಾನಿ ಪಾತ್ರ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರದಲ್ಲಿರುವ ಎಲ್ಲರ ಅಭಿಯನ ಅದ್ಭುತವಾಗಿದೆ. ನನಗೆ ಈ ಸಿನಿಮಾ ಬಹಳ ಟಚ್ ಆಯ್ತು. ಕೊನೆಯ 10 ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ.. ನಾನು ನಿಮ್ಮ ಅಭಿಮಾನಿಯಾಗಿದ್ದೇನೆ ಎಂದು ತಿಳಿಸಿದರು.
ತಂದೆ ಮಗಳ ಬಾಂಧವ್ಯದ ಸುತ್ತ ಈ 'ಹಾಯ್ ನಾನ್ನ' ಕಥೆ ಸುತ್ತುತ್ತದೆ. ನಾಯಕಿ ಮೃಣಾಲ್ ಠಾಕೂರ್ ಜೊತೆ ನಾನಿ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಯುವ ನಿರ್ದೇಶಕ ಶೌರ್ಯುವ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಚಿತ್ರ.