ಶೀರ್ಷಿಕೆಯಿಂದಲೇ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ ಚಿತ್ರ 'ಘೋಸ್ಟ್'. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿರುವ ಪ್ಯಾನ್ ಇಂಡಿಯಾ ಸಿನಿಮಾವಿದು. ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿರೋ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಈ ಸಿನಿಮಾದ ಪ್ರಚಾರಕ್ಕಾಗಿ ಶಿವಣ್ಣ ಹಾಗೂ ಚಿತ್ರತಂಡ ಇಂದು ಮುಂಬೈಗೆ ಬಂದಿದ್ದಾರೆ. ಇದರ ಜೊತೆಗೆ ಅಹಮದಾಬಾದ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ರೋಚಕ ಇಂಡಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಅನ್ನು ವೀಕ್ಷಿಸಿದ್ದಾರೆ.
ಈ ವೇಳೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಅವರು ತಮ್ಮ ಮುಂಬರುವ ಟೈಗರ್ 3 ಚಿತ್ರದ ಪ್ರಚಾರಕ್ಕಾಗಿ ಬಂದಿದ್ದರು. ಇಂದು ಕ್ರಿಕೆಟ್ ಮ್ಯಾಚ್ ನೋಡಲು ಹೋಗುತ್ತಿರುವುದಾಗಿ ಶಿವಣ್ಣ ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದರು. "ಇಂಡಿಯಾ-ಪಾಕಿಸ್ತಾನ ಮ್ಯಾಚ್ ಜೊತೆಯಲಿ ನಾನು. ಇದ್ಕಿಂತ ಹಬ್ಬಾ ಬೇಕಾ?" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದರು. ಅದರಂತೆ ಇದೀಗ ಅಹಮದಾಬಾದ್‍ನಲ್ಲಿ ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ನೋಡಲು ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಈ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಬಂದಿದ್ದು, ಈ ಸಂದರ್ಭದಲ್ಲಿ ಶಿವಣ್ಣನ ಜೊತೆ ಅವರ ಭೇಟಿಯಾಗಿದೆ. ಈ ವೇಳೆ ಘೋಸ್ಟ್’ ಚಿತ್ರದ ನಿರ್ದೇಶಕ ಆರ್.ಜೆ. ಶ್ರೀನಿ ಕೂಡ ಜೊತೆಗಿದ್ದರು. ಇನ್ನು, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕೂಡ ಇಂಡಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ:Cricket World Cup 2023: ಶತಕದಂಚಿನಲ್ಲಿ ಎಡವಿದ ರೋಹಿತ್.. ಪಾಕ್ ವಿರುದ್ಧ ಗೆಲುವಿನತ್ತ ಭಾರತ