ಹನುಮಾನ್ ಚಿತ್ರತಂಡದೊಂದಿಗೆ ಶಿವರಾಜ್ಕುಮಾರ್ ಸೂಪರ್ ಹೀರೋ ಕಾನ್ಸೆಪ್ಟ್ನ 'ಹನುಮಾನ್' ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೇಜ ಸಜ್ಜಾ, ವರಲಕ್ಷ್ಮೀ ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿರುವ 'ಹನುಮಾನ್' ಚಿತ್ರವನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ವೀಕ್ಷಿಸುವ ಮೂಲಕ ಹೊಸ ಪ್ರತಿಭೆಗಳನ್ನು ಬೆಂಬಲಿಸಿದ್ದಾರೆ.
ಸಿನಿಮಾ ವೀಕ್ಷಿಸಿದ ಶಿವಣ್ಣ:ಹೌದು, ಇತ್ತೀಚೆಗೆ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪತ್ನಿ, ಮಗಳೊಟ್ಟಿಗೆ ಹನುಮಾನ್ ಸಿನಿಮಾವನ್ನು ವೀಕ್ಷಿಸಿದ್ದಾರೆ. ಶಿವಣ್ಣನಿಗೆ ಜಿತ್ರದ ಪ್ರಮುಖ ಕಲಾವಿದರಾದ ತೇಜ್ ಸಜ್ಜಾ ಹಾಗೂ ಅಮೃತಾ ಐಯ್ಯರ್ ಸಾಥ್ ಕೊಟ್ಟರು. ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಶಿವಣ್ಣ, ಚಿತ್ರವನ್ನು 'ಮೈಂಡ್ ಬ್ಲೋಯಿಂಗ್' ಎಂದು ವರ್ಣಿಸಿದರು. ಸಿನಿಮಾ ಬಹಳ ಎಂಟರ್ಟೈನಿಂಗ್ ಆಗಿದೆ ಎಂದ ನಟ, ತೇಜ ಸಜ್ಜಾ, ಅಮೃತಾ ಐಯ್ಯರ್, ವರಲಕ್ಷ್ಮೀ ಶರತ್ ಕುಮಾರ್ ಅಭಿನಯವನ್ನು ಕೊಂಡಾಡಿದರು.
ತೇಜಸ್ವಿ ಸೂರ್ಯ ಭೇಟಿಯಾದ ತೇಜ ಸಜ್ಜಾ: ಸಂಸದ ತೇಜಸ್ವಿ ಸೂರ್ಯ ಅವರನ್ನು ನಟ ತೇಜ ಸಜ್ಜಾ ನಿನ್ನೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಇದೊಂದು ಆತ್ಮೀಯ ಭೇಟಿಯಾಗಿದ್ದು, ಹನುಮಾನ್ ಸಿನಿಮಾವನ್ನು ಶೀಘ್ರದಲ್ಲಿಯೇ ವೀಕ್ಷಿಸುವುದಾಗಿ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ತೇಜ ಸಜ್ಜಾ ಎಕ್ಸ್ ಪೋಸ್ಟ್:ನಟ ಶಿವರಾಜ್ಕುಮಾರ್ ಅವರನ್ನು ಭೇಟಿಯಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಶೇರ್ ಮಾಡಿದ ನಾಯನ ನಟ ತೇಜ ಸಜ್ಜಾ ಶಿವಣ್ಣನ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ''ಹನುಮಾನ್ ಮೀಟ್ಸ್ ಭಜರಂಗಿ. ನಿಮ್ಮ ಮಾತುಗಳಿಗೆ, ಬೆಂಬಲಕ್ಕೆ ಧನ್ಯವಾದಗಳು ಸರ್. ಧನ್ಯವಾದಗಳು ಶಿವಣ್ಣ ನಿಮ್ಮ ಪ್ರೀತಿಗೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು. ಜೈ ಹನುಮಾನ್'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:'ಗುಂಟೂರ್ ಖಾರಂ' & 'ಹನುಮಾನ್': ಬಾಕ್ಸ್ ಆಫೀಸ್ ಕಲೆಕ್ಷನ್ ಹೀಗಿದೆ!
ಜನವರಿ 12 ರಂದು ಹನುಮಾನ್ ಚಿತ್ರಮಂದಿರ ಪ್ರವೇಶಿಸಿತು. ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ 'ಗುಂಟೂರ್ ಖಾರಂ' ಕೂಡ ಅಂದೇ ತೆರೆಗಪ್ಪಳಿಸಿತು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ನಡುವೆಯೂ ಹನುಮಾನ್ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಹನುಮಾನ್' ಐದು ದಿನಗಳಲ್ಲಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 68.75 ಕೋಟಿ ರೂ. ಗಳಿಸಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ವ್ಯವಹಾರ ನಡೆಸಿದೆ.
ಇದನ್ನೂ ಓದಿ:'ಬ್ಯಾಚುಲರ್ ಪಾರ್ಟಿ' ಟ್ರೇಲರ್ ನೋಡಿದ್ರಾ: ಸಿನಿಮಾ ವೀಕ್ಷಿಸುವ ಕಾತರದಲ್ಲಿ ಸಿನಿಪ್ರಿಯರು