ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರತೀ ವರ್ಷದಂತೆ ಇಂದು ಸಹ ಕಂಠೀರವ ಸ್ಟುಡಿಯೋದಲ್ಲಿರುವ ತಂದೆ ರಾಜ್‌ಕುಮಾರ್ ಹಾಗೂ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿಗೆ ನಮಸಿ, ಆರ್ಶೀವಾದ ಪಡೆದಿದ್ದಾರೆ.
ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ವಿಡಿಯೋ:ಬಳಿಕ ಘೋಸ್ಟ್ ಚಿತ್ರತಂಡ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾದರು. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳು, ಶಿವ ರಾಜ್‌ಕುಮಾರ್, ಪತ್ನಿ ಗೀತಾ ಶಿವರಾಜ್ಕುಮಾರ್, ನಿರ್ದೇಶಕ ಶ್ರೀನಿ ಹಾಗೂ ನಿರ್ಮಾಪಕ ಸಂದೇಶ್ ಸಮ್ಮುಖದಲ್ಲಿ ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ವಿಡಿಯೋವನ್ನು ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಘೋಸ್ಟ್ ಚಿತ್ರತಂಡದ ಜೊತೆಗೆ ಕೇಕ್ ಕಟ್ ಮಾಡುವ ಮೂಲಕ ಶಿವ ರಾಜ್‌ಕುಮಾರ್ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು. BIG DADDY ಸ್ಪೆಷಲ್ ವಿಡಿಯೋದಲ್ಲಿ ಶಿವ ರಾಜ್‌ಕುಮಾರ್ ಸಖತ್ ಸ್ಟೈಲಿಶ್, ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಘೋಸ್ಟ್: ಇದೊಂದು ಆ್ಯಕ್ಷನ್ ಥ್ರಿಲ್ಲರ್ ಜಾನರ್‌ನ ಚಿತ್ರವಾಗಿದ್ದು, ಕಮರ್ಷಿಯಲ್ ಎಲಿಮೆಂಟ್ಗಳು ಬಹಳ ಇವೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಅವರಿಗೆ ನಾಯಕಿಯೇ ಇಲ್ಲ. ಸ್ಪೈ ಥ್ರಿಲ್ಲರ್ ಮಾದರಿಯ ಕಥೆ ಈ ಸಿನಿಮಾದಲ್ಲಿ ಇರಲಿದೆ.
ಘೋಸ್ಟ್ 2: ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್, ಘೋಸ್ಟ್ ಹೊಸ ಜಾನರ್ ಸಿನಿಮಾ. ನಾಲ್ಕು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಘೋಸ್ಟ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಘೋಸ್ಟ್ 2 ಕಥೆ ಬಹಳ ಅದ್ಭುತವಾಗಿದೆ ಎಂದು ತಿಳಿಸಿದರು. ಟೋಪಿವಾಲ, ಓಲ್ಡ್ ಮಾಂಕ್ ಚಿತ್ರಗಳನ್ನು ನಿರ್ದೇಶನ ಮಾಡಿರೋ ಶ್ರೀನಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾನು ಶಿವಣ್ಣನ ಅಭಿಮಾನಿ, ನನ್ನ ಮೆಚ್ಚಿನ ನಟನಿಗೆ ನಿರ್ದೇಶನ ಮಾಡಿರೋದು ಬಹಳ ಖುಷಿ ಕೊಟ್ಟಿದೆ ಎಂದು ನಿರ್ದೇಶಕರು ತಿಳಿಸಿದರು.
ಶಿವ ರಾಜ್‌ಕುಮಾರ್ ಲುಕ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಬಾಲಿವುಡ್ ನಟ ಅನುಪಮ್ ಖೇರ್, ಮಲೆಯಾಳಂ ನಟ ಜಯರಾಮ್, ಬಹುಭಾಷಾ ನಟ ಪ್ರಶಾಂತ್ ನಾರಾಯಣನ್ ಹಾಗೇ ಕನ್ನಡದ ಅಚ್ಯುತ್ ಕುಮಾರ್, ದತ್ತಣ್ಣ ಮತ್ತು ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಟಗರು ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ ಮಹೇಂದ್ರ ಸಿಂಹ ಛಾಯಾಗ್ರಹಣ ನಿಭಾಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುತ್ತಿದ್ದು, ಸಂದೇಶ್ ಎನ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಬಹುತೇಕ ಶೂಟಿಂಗ್ ಮುಗಿಸಿರುವ ಘೋಸ್ಟ್ ದಸರಾ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.
ಧೀರ ಸಿನಿಮಾ: 'ಧೀರ' ಶೀರ್ಷಿಕೆಯ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ನವೀನ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ನಟನಾಗಬೇಕು ಎಂಬ ಕನಸು ಹೊತ್ತು 12 ವರ್ಷಗಳ ಹಿಂದೆ ಮಲೆನಾಡಿನಿಂದ ಬೆಂಗಳೂರಿಗೆ ಆಗಮಿಸಿದ ನವೀನ್ ಶೆಟ್ಟಿ ಅವರು ಎಸ್.ನಾರಾಯಣ್, ಓಂ ಪ್ರಕಾಶ್ ರಾವ್, ಗಡ್ಡವಿಜಿ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನಿರ್ದೇಶನದ ಮೇಲೆ ಆಸಕ್ತಿ ಹುಟ್ಟಿ ಅದರಲ್ಲೇ ಪರಿಣಿತಿ ಪಡೆದಿಕೊಂಡಿದ್ದಾರೆ. ಓಟಿಟಿ ವೇದಿಕೆಗೆಂದೇ 'ನಿಧಾನವಾಗಿ ಚಲಿಸಿ' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಮ್ಮೆ ಆ ಚಿತ್ರವನ್ನು ವೀಕ್ಷಿಸಿದ ಶಿವಣ್ಣ ಮೆಚ್ಚಿ ಬೆನ್ನು ತಟ್ಟಿದ್ದರು. ಅದೇ ಸಮಯದಲ್ಲಿ ಶಿವಣ್ಣ ಅವರಿಗೆಂದೇ ಮಾಡಿಕೊಂಡಿದ್ದ 'ಧೀರ' ಕಥೆಯನ್ನು ಹೇಳಿ ಅವರನ್ನು ಒಪ್ಪಿಸಿದ್ದಾರೆ.
ಇದನ್ನೂ ಓದಿ:Shiva Rajkumar:''ನೀವ್ ಗನ್ನಲ್ಲಿ ಹೆದರಿಸಿದ್ರೆ, ನಾನ್ ಬರೀ ಕಣ್ಣಲ್ಲೇ...ಒರಿಜಿನಲ್ ಗ್ಯಾಂಗ್ಸ್ಟರ್''
ತೆರೆಮೇಲೆ ಶಿವಣ್ಣ ಅವರನ್ನು ವಿಭಿನ್ನ ರೀತಿಯಲ್ಲಿ ತೋರಿಸಲು ಹೊಟಿರುವ ನವೀನ್ ಶೆಟ್ಟಿ, ಮಾಸ್, ಅಂಡರ್ ವರ್ಲ್ಡ್, ಆ್ಯಕ್ಷನ್ ಡ್ರಾಮಾ ಸಬ್ಜೆಕ್ಟ್ ಅನ್ನು ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ಕಲಿಯುಗ ಕರ್ಣ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹೆಚ್.ಸಿ. ಶ್ರೀನಿವಾಸ್(ಶಿಲ್ಪ ಶ್ರೀನಿವಾಸ್) ಅರ್ಪಿಸುತ್ತಿರುವ ಈ ಚಿತ್ರವನ್ನು ಚಿಲ್ಲಿ ಫಿಲಂಸ್ ಎಂಟರ್ಟೈನ್ಮೆಂಟ್ ಅಡಿ ಸಾಗರ್ ಅವರು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಧೀರ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ನಡೆಯುತ್ತಿದ್ದು, ಶೀಘ್ರದಲ್ಲೇ ನಾಯಕಿ ಸೇರಿದಂತೆ ಉಳಿದ ತಾಂತ್ರಿಕ ವರ್ಗದ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.