ಕರ್ನಾಟಕ

karnataka

ETV Bharat / entertainment

'ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ': ಸಿನಿಮಾ, ರಜನಿಕಾಂತ್, ಮೋಹನ್​ ಲಾಲ್​ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು! - Shiva rajkumar on Rajinikanth

'ಘೋಸ್ಟ್' ಸಿನಿಮಾ ಪ್ರಮೋಶನ್​ ಸಂದರ್ಭ ನಟ ಶಿವ ರಾಜ್​​ಕುಮಾರ್​ ಅವರು ರಜನಿಕಾಂತ್, ಮೋಹನ್‌ಲಾಲ್ ಜೊತೆಗಿನ ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.

Shiva rajkumar
ನಟ ಶಿವ ರಾಜ್​​ಕುಮಾರ್

By ETV Bharat Karnataka Team

Published : Oct 18, 2023, 2:39 PM IST

Updated : Oct 18, 2023, 3:52 PM IST

'ಘೋಸ್ಟ್' ಸಿನಿಮಾ ಪ್ರಮೋಶನ್​....

ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಅಭಿನಯದ 'ಘೋಸ್ಟ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ನಾಳೆ ತೆರೆಗಪ್ಪಳಿಸಲಿರುವ ಈ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಶಿವಣ್ಣ ಆ್ಯಂಡ್​ ಟೀಮ್​​ ಘೋಸ್ಟ್ ಪ್ರಮೋಶನ್​​ ನಡೆಸಿ, ಚಿತ್ರದ ಕ್ರೇಜ್​​​ ಹೆಚ್ಚಿಸಿದೆ.

ಕೇರಳ ಬಗ್ಗೆ ಶಿವಣ್ಣನ ಮಾತು: ಕೇರಳ ರಾಜ್ಯದಲ್ಲೂ ಘೋಸ್ಟ್ ಪ್ರಚಾರ ಕೈಗೊಳ್ಳಲಾಗಿತ್ತು. ಕೊಚ್ಚಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಣ್ಣ, "ಕೇರಳ ನನಗೆ ಹೊಸ ಸ್ಥಳವಲ್ಲ. ನಾನು ಕೇರಳಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಪ್ರತೀ ವರ್ಷ ನಾನು ಶಬರಿಮಲೆಗೆ ಭೇಟಿ ನೀಡೋ ಸಲುವಾಗಿ ಇಲ್ಲಿಗೆ ಬರುತ್ತೇನೆ. ಅತಿರಪಲ್ಲಿ ಜಲಪಾತ ನನ್ನ ಮೆಚ್ಚಿನ ಸ್ಥಳ. ನನ್ನ ಮಗಳ ವೆಬ್ ಸೀರಿಸ್​ ಅನ್ನು ಅಲಪ್ಪುಳದಲ್ಲಿ ಚಿತ್ರೀಕರಿಸಲಾಗಿದೆ. ಆಲಪ್ಪುಳದ ಹೌಸ್‌ಬೋಟ್‌ಗಳಲ್ಲಿ ತಂಗೋದು ಬಹಳ ಇಷ್ಟ'' ಎಂದು ಕೇರಳದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

'ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ':'ಘೋಸ್ಟ್' ಮಾಸ್ ಚಿತ್ರವಾಗುತ್ತಾ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಹ್ಯಾಟ್ರಿಕ್ ಹೀರೋ, "ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷೆ ಬೇಡ. ಕೆಜಿಎಫ್ ಶೈಲಿಯ ಸಿನಿಮಾ ನಿರೀಕ್ಷೆ ಇಟ್ಟುಕೊಂಡು ಘೋಸ್ಟ್​ಗೆ ಟಿಕೆಟ್ ಕೊಳ್ಳುವ ಅಗತ್ಯವಿಲ್ಲ. ಕೆಜಿಎಫ್ ನಲ್ಲೇ ಕೆಜಿಎಫ್ ಕಥೆ ಮುಗಿದಿದೆ. ಈ ಚಿತ್ರದಲ್ಲಿ ಅಂತಹ ಅನುಭವಗಳನ್ನು ನಿರೀಕ್ಷಿಸಲಾಗದು. ಕೆಜಿಎಫ್ ಬೇರೆ - ಘೋಸ್ಟ್ ಚಿತ್ರವೇ ಬೇರೆ" ಎಂದು ಉತ್ತರಿಸಿದರು. ಶಿವ ರಾಜ್​ಕುಮಾರ್ ಅವರ ಮಾಸ್ ರಿಪ್ಲೈಗೆ ನಟ ಜೈರಾಮ್ ಶಿಳ್ಳೆ ಹೊಡೆದು ಬೆಂಬಲ ಸೂಚಿಸಿದರು.

ಮೋಹನ್‌ಲಾಲ್ ಬಗ್ಗೆ ಹ್ಯಾಟ್ರಿಕ್ ಹೀರೋ ಹೇಳಿದ್ದಿಷ್ಟು: ನಟ ಮೋಹನ್‌ಲಾಲ್ ಅವರೊಂದಿಗಿನ ಫ್ರೆಂಡ್​ಶಿಪ್​​ ಬಗ್ಗೆ ಮಾತನಾಡಿದ ಕರುನಾಡ ಚಕ್ರವರ್ತಿ, "ನನ್ನ ಕುಟುಂಬ ಮೋಹನ್‌ಲಾಲ್ ಅವರೊಂದಿಗೆ ಬಹಳ ಆತ್ಮೀಯ ಸಂಬಂಧ ಹೊಂದಿದೆ. ಪುನೀತ್, ಮೋಹನ್​ಲಾಲ್ ಜೊತೆ​ 'ಮೈತ್ರಿ' ಚಿತ್ರದಲ್ಲಿ ನಟಿಸಿದ್ದರು. ನಟ ದಿಲೀಪ್ ಕೂಡ ನನ್ನ ಆಪ್ತ ಸ್ನೇಹಿತ. ವಜ್ರಕಾಯ ಚಿತ್ರದಲ್ಲಿ ದಿಲೀಪ್ ಕಾಣಿಸಿಕೊಂಡಿದ್ದಾರೆ'' ಎಂದು ತಿಳಿಸಿದರು.

ಘೋಸ್ಟ್ ಚಿತ್ರದ ಟ್ರೇಲರ್‌ನಲ್ಲಿ ಶಿವ ರಾಜ್​​​ಮಾರ್ ಅವರ ಹಿಂದಿನ ದಿನಗಳನ್ನು (ಯುವಕನ ಪಾತ್ರ) ತೋರಿಸಲಾಗಿದೆ. ಇದು ಟ್ರೇಲರ್‌ನ ಪ್ರಮುಖ ಆಕರ್ಷಣೆ. ಡಿ-ಏಜಿಂಗ್ ಸಿಸ್ಟಮ್ ಮೂಲಕ ಆ ದೃಶ್ಯವನ್ನು ರಚಿಸಲಾಗಿದೆ. ಈ ಬಗ್ಗೆ ಮಾತನಾಡಿದ ಶಿವಣ್ಣ, ತಾಂತ್ರಿಕ ಅಂಶಗಳ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಫೈಲ್​​ ಆಗೋ ಸಾಧ್ಯತೆ ಬಗ್ಗೆ ನಿರ್ದೇಶಕರೊಂದಿಗೆ ಚರ್ಚಿಸಿದೆ. ನಂತರ ನಾನು ಈ ದೃಶ್ಯಕ್ಕೆ ಒಪ್ಪಿಕೊಂಡೆ. ಚಿತ್ರದಲ್ಲಿ ಯೌವ್ವನದ ಹಂತವನ್ನು ಮರುಸೃಷ್ಟಿಸಿದಾಗ ಆತ್ಮವಿಶ್ವಾಸ ಬೆಳೆಯಿತು ಎಂದು ತಿಳಿಸಿದರು.

ಇದನ್ನೂ ಓದಿ:ನಾಳೆ ಲಿಯೋ ಬಿಡುಗಡೆ: ಆದರೆ ವಿಜಯ್​​ ಅಭಿಮಾನಿಗಳಿಗಿದೆ ಬೇಸರದ ಸಂಗತಿ! ಏನದು?

ರಜನಿಕಾಂತ್ ಬಗ್ಗೆ ಶಿವ ರಾಜ್​ಕುಮಾರ್​ ಮಾತು: ಇನ್ನೂ ಭಾರತದ ಪ್ರಸಿದ್ಧ ನಟ ರಜನಿಕಾಂತ್ ಅವರೊಂದಿಗೆ ಬಹಳ ಉತ್ತಮ ಒಡನಾಟವಿದೆ. ಚಿಕ್ಕಂದಿನಿಂದಲೂ ನನಗೆ ಮತ್ತು ತಮ್ಮ ಕುಟುಂಬಕ್ಕೆ ಅವರು ಪರಿಚಿತರು, ಆತ್ಮೀಯರು ಎಂದು ತಿಳಿಸಿದರು. ಮಾತು ಮುಂದುವರಿಸಿದ ನಟ, ಬಾಲ್ಯದಲ್ಲಿ ಪ್ರತೀ ವರ್ಷ ರಜನಿಕಾಂತ್ ಅವರ ಕೈ ಹಿಡಿದು ಶಬರಿಮಲೆ ಬೆಟ್ಟ ಹತ್ತುತ್ತಿದ್ದೆ. ರಜನಿಕಾಂತ್ ಸೂಪರ್ ಸ್ಟಾರ್. ಹಾಗಾಗಿ, ನಾನು ಅವರ ಜೊತೆ ನಡೆದುಕೊಳ್ಳುವುದನ್ನು ನೋಡಿ ಜನ ಆಶ್ಚರ್ಯ ಪಡುತ್ತಿದ್ದರು. ನನಗೆ ತಮಿಳು ಮತ್ತು ಹಿಂದಿಯಿಂದ ಹಲವು ಆಫರ್​ಗಳು ಬಂದಿದ್ದವು. ಆದರೆ ಜೈಲರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್​ ಕೊಟ್ಟೆ. ರಜನಿಕಾಂತ್ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ನಾನು ಜೈಲರ್ ಚಿತ್ರ ಪಾತ್ರ ಒಪ್ಪಿಕೊಂಡೆ ಎಂದು ತಿಳಿಸಿದರು.

ಇದನ್ನೂ ಓದಿ:ನಾಳೆ ವಸಿಷ್ಠ ಸಿಂಹ ಜನ್ಮದಿನ: ಬಹುಬೇಡಿಕೆ ನಟನ ಹೊಸ ಸಿನಿಮಾ ಘೋಷಣೆ

ಅಭಿನಯ ಇಷ್ಟವಿರಲಿಲ್ಲ: ಬಾಲ್ಯದಲ್ಲಿ ನನಗೆ ನಟನೆ ಇಷ್ಟವಿರಲಿಲ್ಲ. ಶೂಟಿಂಗ್​ ವೇಳೆ ವಿಗ್ ಕೂಡ ಎಸೆದಿದ್ದೆ. ನನ್ನ ಸ್ಟಡೀಸ್​ ಬಳಿಕ, ನನ್ನ ತಂದೆಯ ಸಲಹೆಯ ಮೇರೆಗೆ ಹೆಚ್ಚಿನ ಅಧ್ಯಯನಕ್ಕಾಗಿ ನಾನು ಚಲನಚಿತ್ರ ಅಕಾಡೆಮಿಗೆ ಸೇರಿಕೊಂಡೆ. ಬಾಲ್ಯದಿಂದಲೂ ನೃತ್ಯವನ್ನು ಇಷ್ಟಪಡುತ್ತಿದ್ದ ನನಗೆ ನೃತ್ಯ ಮಾಡುವುದು ಕಷ್ಟವಾಗಿರಲಿಲ್ಲ. ಅಕಾಡೆಮಿಯಿಂದ ಕೂಚುಪುಡಿ ಕಲಿತು ಕರಗತ ಮಾಡಿಕೊಂಡ ನಂತರ ನೃತ್ಯದ ವಿಧಾನ ಸಂಪೂರ್ಣ ಬದಲಾಯಿತು. ನೃತ್ಯವನ್ನು ಜೀವನದ ಒಂದು ಭಾಗವಾಗಿ ಪರಿಗಣಿಸಿದೆ. ನಂತರ ಓರ್ವ ನಟನಾಗಿ ವೃತ್ತಿಜೀವನ ಆರಂಭಿಸಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಳೆ ವಿಶ್ವಾದ್ಯಂತ ಪಂಚಭಾಷೆಗಳಲ್ಲಿ ಘೋಸ್ಟ್ ಸಿನಿಮಾ ಬಿಡುಗಡೆ ಆಗಲಿದೆ.

Last Updated : Oct 18, 2023, 3:52 PM IST

ABOUT THE AUTHOR

...view details