ಕರುನಾಡ ಚಕ್ರವರ್ತಿ ಡಾ.ಶಿವ ರಾಜ್ಕುಮಾರ್ ಅವರು ಯುವ ಸಿನಿಮೋತ್ಸಾಹಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿಯೇ ಅವರು ಕನ್ನಡ ಚಿತ್ರರಂಗದ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಲ್ಲುವ ಶಿವಣ್ಣನ ಹಾದಿಯಲ್ಲಿ ಅವರ ಮಗಳು ನಿವೇದಿತಾ ಕೂಡ ನಡೆಯಲು ಮುಂದಾಗಿದ್ದಾರೆ. ಕಲೆ ಅನ್ನೋದು ದೊಡ್ಮನೆ ಕುಟುಂಬಕ್ಕೆ ರಕ್ತಗತವಾಗಿಯೇ ಬಂದಿದೆ. ಇಡೀ ಕುಟುಂಬವೇ ಕಲಾಸೇವೆಯಲ್ಲಿ ತೊಡಗಿದೆ.
ಅಂದು ಡಾ. ರಾಜ್ಕುಮಾರ್ ಬೆಳ್ಳಿ ಪರದೆಯಲ್ಲಿ ರಾರಾಜಿಸುತ್ತಿದ್ದರೆ, ತೆರೆ ಹಿಂದೆ ಅವರಿಗೆ ಬೆನ್ನೆಲುಬಾಗಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಕಟ್ಟಿ ಪಾರ್ವತಮ್ಮ ರಾಜ್ಕುಮಾರ್ ನೆರವಾಗಿದ್ದರು. ಪೂರ್ಣಿಮಾ ಎಂಟರ್ಪ್ರೈಸರ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಪಾರ್ವತಮ್ಮ ಕೊಡುಗೆಯಾಗಿ ನೀಡಿದ್ದಾರೆ. ಅದನ್ನೇ ಅಣ್ಣಾವ್ರ ಇಡೀ ತಲೆಮಾರು ಮುಂದುವರೆಸಿಕೊಂಡು ಬಂದಿದೆ.
ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಅವರ ಪತ್ನಿ ಗೀತಾ ಶಿವ ರಾಜ್ಕುಮಾರ್ ಗೀತಾ ಪಿಕ್ಚರ್ಸ್ ಅಡಿ ನಿರ್ಮಾಪಕರಾಗಿದ್ದಾರೆ. ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನಿಧನದ ನಂತರ ಪಿಆರ್ಕೆ ಪ್ರೊಡಕ್ಷನ್ ಅಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ದುಡಿಯುತ್ತಿದ್ದಾರೆ. ಇದೀಗ ಶಿವಣ್ಣನ ಎರಡನೇ ಪುತ್ರಿ ನಿವೇದಿತಾ ಶಿವ ರಾಜ್ಕುಮಾರ್ ತಮ್ಮದೇ ಒಡೆತನದ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ.
ನಿವೇದಿತಾ ಅವರ ಕನಸಿನ ಕೂಸು 'ಶ್ರೀ ಮುತ್ತು ಸಿನಿ ಸರ್ವಿಸ್' ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲೆಂದು ರೂಪುಗೊಂಡಿರುವ ನಿರ್ಮಾಣ ಸಂಸ್ಥೆಯಾಗಿದೆ. ಈಗಾಗಲೇ ಈ ಸಂಸ್ಥೆಯಡಿ ಧಾರಾವಾಹಿ ಹಾಗೂ ಮೂರು ವೆಬ್ಸೀರೀಸ್ಗಳು ಹೊರಬಂದಿವೆ. ಈಗ ಇದೇ ಬ್ಯಾನರ್ ಅಡಿ ನಿವೇದಿತಾ ಶಿವ ರಾಜ್ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.