ಬಾಲಿವುಡ್ ನಟಿ ಶಿಲ್ಪಾ ಶಿಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ತಮ್ಮ ಜೀವನಾಧಾರಿತ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕಂಪ್ಲೀಟ್ ಫೇಸ್ ಮಾಸ್ಕ್ ಧರಿಸಿ ಓಡಾಡುತ್ತಿದ್ದ ಉದ್ಯಮಿ ರಾಜ್ ಕುಂದ್ರಾ ಇದೀಗ ಮಾಸ್ಕ್ ಇಲ್ಲದೇ ಸಾರ್ವಜನಿಕರಿಗೆ ದರ್ಶನ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಯುಟಿ 69 ಚಿತ್ರದ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದಾರೆ. ಇದೀಗ ಗೊಂದಲ ಮೂಡಿಸುವಂತಹ ಟ್ವೀಟ್ ಮಾಡಿ, ಜನರ ಗಮನ ಸೆಳೆದಿದ್ದಾರೆ. ಆದರೆ ಇದು ಸಿನಿಮಾ ಪ್ರಚಾರದ ಭಾಗ ಆಗಿರಬಹುದೆಂಬುದನ್ನು ಅಲ್ಲಗೆಳೆಯುವಂತಿಲ್ಲ.
ಉದ್ಯಮಿ ಪತಿ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಬೇರ್ಪಟ್ಟಿರುವುದಾಗಿ ಘೋಷಿಸಿದ್ದಾರೆ. ನಿರ್ದಿಷ್ಟ ವಿವರಗಳನ್ನು ನೀಡದಿದ್ದರೂ, ಅವರ ಟ್ವೀಟ್ ಪ್ರತ್ಯೇಕತೆಯನ್ನೇ ಸೂಚಿಸಿದೆ. ಈ ಸವಾಲಿನ ಸಂದರ್ಭ ಖಾಸಗಿತನಕ್ಕೂ ವಿನಂತಿಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಪತಿ ಮಾಡಿರುವ ಈ ಪೋಸ್ಟ್ ಅನೇಕರ ಮನಸ್ಸಲ್ಲಿ ಗೊಂದಲ ಸೃಷ್ಟಿಸಿದೆ. ಜೋಡಿಯ ದಾಂಪತ್ಯ ಜೀವನ ನಿಜವಾಗಿಯೂ ಅಂತ್ಯಗೊಂಡಿದೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು ಇದು ಸಿನಿಮಾ ಪ್ರಚಾರದ ಭಾಗವಾಗಿರಬಹುದು ಎಂದು ಊಹಿಸಿದ್ದಾರೆ.
ಇದೇ ಸಂದೇಶವನ್ನು ರಾಜ್ ಕುಂದ್ರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿಯೂ ಹಂಚಿಕೊಂಡಿದ್ದಾರೆ. ಉದ್ಯಮಿಯ ಪೋಸ್ಟ್ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಕೆಲವರು "ಪ್ರತ್ಯೇಕ" ಎಂದರೆ ''ವಿಚ್ಛೇದನವೇ''? ಎಂದು ಪ್ರಶ್ನಿಸಿದ್ದಾರೆ. ಇತರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಂದಿಷ್ಟು ಜನರು ಇದು ಅವರ ಮುಂಬರುವ ಸಿನಿಮಾ 'ಯುಟಿ69'ರ ಪ್ರಚಾರದ ಭಾಗ ಎಂದು ಊಹಿಸಿದ್ದಾರೆ.