ಜೈಲು ಜೀವನ ಆಧಾರಿತ ಚಿತ್ರವೊಂದು ಬಾಲಿವುಡ್ನಲ್ಲಿ ಸಿದ್ಧವಾಗಲಿದೆ. ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಸಿನಿ ರಂಗಕ್ಕೆ ಪದಾರ್ಪಣೆ ಮಾಡಲಿದ್ದಾರಂತೆ. ಅವರು ತಮ್ಮ ಜೈಲು ಜೀವನದ ಅನುಭವದ ಕುರಿತು ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಅವರೇ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ರಾಜ್ ಕುಂದ್ರಾ ಎದುರಿಸಿದ ಸಂಕಷ್ಟಗಳನ್ನು ಕಥಾವಸ್ತುವನ್ನಾಗಿರಿಸಿ ಸಿನಿಮಾ ತಯಾರಾಗಲಿದೆ.
ನಿರ್ಮಾಣದಿಂದ ಸ್ಕ್ರಿಪ್ಟ್ವರೆಗೆ ಎಲ್ಲಾ ವಿಭಾಗಗಳಲ್ಲೂ ರಾಜ್ ಕುಂದ್ರಾ ಮುತುವರ್ಜಿ ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರೀಕರಣ ಮುಗಿಯುವವರೆಗೂ ನಿರ್ದೇಶಕರ ವಿವರಗಳನ್ನು ಗೌಪ್ಯವಾಗಿಡಲು ನಿರ್ಧರಿಸಲಾಗಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಅವರು ಈಗಾಗಲೇ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸಿದ್ದಾರೆ ಎಂದು ಬಾಲಿವುಡ್ ವಿಶ್ಲೇಷಕರು ಹೇಳುತ್ತಿದ್ದಾರೆ. ರಾಜ್ ಕುಂದ್ರಾ ತಮ್ಮ ಹಿಂದಿನ ವಿವಾದಗಳಿಂದ ಹೊರಬರಲು ಈ ಚಿತ್ರವನ್ನು ವೇದಿಕೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
2021 ರಲ್ಲಿ ರಾಜ್ ಕುಂದ್ರಾ ಅವರ ಬಂಧನವಾಗಿತ್ತು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಮೇಲೆ ರಾಜ್ಕುಂದ್ರಾ ಜೈಲು ಪಾಲಾಗಿದ್ದರು. ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಎಫ್‌ಐಆರ್‌ನಲ್ಲಿ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರನ್ನೂ ಸಹ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ಕುಂದ್ರಾ ಹೆಚ್ಚಾಗಿ ಎಲ್ಲಿಯೂ ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಜೊತೆಗೆ ತಮ್ಮ ಚಿತ್ರವನ್ನೂ ಎಲ್ಲಿಯೂ ಕಾಣದಂತೆ ನೋಡುಕೊಳ್ಳುತ್ತಿದ್ದರು. ಇದೀಗ ಒಮ್ಮೆಲೆ ಸಿನಿಮಾದಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ.