ಬಿಗ್ ಬಾಸ್ ಶೋ ಖ್ಯಾತಿಯ ಶೆಹನಾಜ್ ಗಿಲ್ ತಮ್ಮ ಚೊಚ್ಚಲ ಹಿಂದಿ ಚಿತ್ರ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಸಿನಿಮಾ ನಾಳೆ ಅದ್ಧೂರಿಯಾಗಿ ತೆರೆ ಕಾಣಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಚಿತ್ರತಂಡ ಈಗಾಗಲೇ ಹಲವು ಸಂದರ್ಶನಗಳನ್ನು ಕೊಟ್ಟಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಸಂದರ್ಶಕರು ಇವರಿಗೆ ಕೇಳಿದ ಪ್ರತೀ ಪ್ರಶ್ನೆಯನ್ನು ಇಂಗ್ಲಿಷ್‌ನಿಂದ ಹಿಂದಿಗೆ ಭಾಷಾಂತರಿಸುತ್ತಿದ್ದರು. ಇಂಗ್ಲಿಷ್ ಬಾರದ ಕಾರಣ ಶೆಹನಾಜ್ ಗಿಲ್ ಅವರಿಗಾಗಿ ಅಭಿಮಾನಿಗಳ ಪ್ರಶ್ನೆಗಳನ್ನು ಹಿಂದಿಗೆ ಭಾಷಾಂತರ ಮಾಡುತ್ತಿದ್ದರು. ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಂತರ ಸಂದರ್ಶಕರನ್ನು ತಡೆದ ಶೆಹನಾಜ್, ನನಗೆ ಅಷ್ಟೂ ಬರಲ್ಲ ಅಂದ್ಕೋಬೇಡಿ. ಇಂಗ್ಲಿಷ್ ಭಾಷೆಯನ್ನುಒಂದು ಹಂತದ ಮಟ್ಟಿಗೆ ಅರ್ಥ ಮಾಡಿಕೊಳ್ಳಬಲ್ಲೆ ಎಂದು ತಿಳಿಸಿದರು.
ಶೆಹನಾಜ್ ಗಿಲ್ ಅವರು ನಟ ಸಲ್ಮಾನ್ ಖಾನ್ ನಿರೂಪಣೆಯ ಜನಪ್ರಿಯ ಹಿಂದಿ ಬಿಗ್ ಬಾಸ್‌ನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆಯ ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಮೂಲತಃ ಪಂಜಾಬ್ನವರಾದ ಶೆಹನಾಜ್ ತಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ಬಿಗ್ ಬಾಸ್ ಸೇರಿದಂತೆ ಕೆಲವೆಡೆ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರದ ಸಂದರ್ಶನವೊಮದರಲ್ಲಿ ಶೆಹನಾಜ್ ಅವರಿಗಾಗಿ ಪ್ರಶ್ನೆಗಳನ್ನು ಹಿಂದಿಗೆ ಭಾಷಾಂತರ ಮಾಡಲಾಗುತ್ತಿತ್ತು.
ಆ ಸಂದರ್ಭ ಸಂದರ್ಶಕರನ್ನು ತಡೆದ ಶೆಹನಾಜ್ ಗಿಲ್, ಇಂಗ್ಲಿಷ್ ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿದೆ. ನಾನು ಸಂಪೂರ್ಣ ವಿಫಲಳಾಗಿಲ್ಲ ಎಂದು ತಿಳಿಸಿದರು. ಶೆಹನಾಜ್ ತಮ್ಮ ಈ ಹೇಳಿಕೆ ನೀಡುತ್ತಿದ್ದಂತೆ ನಕ್ಕರು, ಸಂದರ್ಶಕರೂ ಕೂಡ ನಕ್ಕರು. ಕೆಲ ಕ್ಷಣ ನಗೆಗಡಲಲ್ಲಿ ತೇಲಿದರು.