ಕಿರುತೆರೆ ಹಾಗು ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ 2021ರ ಸೆಪ್ಟೆಂಬರ್ 2ರಂದು ಇಹಲೋಕ ತ್ಯಜಿಸಿದ್ದರು. ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-13ರ ವಿಜೇತರಾಗಿದ್ದ ಶುಕ್ಲಾ 40ರ ಹರೆಯದಲ್ಲೇ ನಿಧನರಾಗಿದ್ದು ಮಾತ್ರ ಅವರ ತಾಯಿ, ಸಹೋದರಿಯರು, ಅಭಿಮಾನಿಗಳಿಗೆ ವಿಶೇಷವಾಗಿ ವದಂತಿಯ ಗರ್ಲ್ಫ್ರೆಂಡ್ ಶೆಹನಾಜ್ ಗಿಲ್ ಅವರಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಗೆಳೆಯನ ಮರಣದಿಂದ ನಿಧಾನವಾಗಿ ಸುಧಾರಿಸಿಕೊಂಡಿರುವ ಶೆಹನಾಜ್ ಗಿಲ್ ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಹುದಿನಗಳ ನಂತರ ಶೆಹನಾಜ್ ಬಾಯಲ್ಲಿ ಸಿದ್ಧಾರ್ಥ್ ಹೆಸರು ಕೇಳಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಶನಿವಾರ ರಾತ್ರಿ ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಮಿಡ್ಲ್ ಈಸ್ಟ್ ಅಚಿವರ್ಸ್ ನೈಟ್ (Filmfare Middle East Achievers Night) ವೇದಿಕೆಯಲ್ಲಿ ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತೆ ಶೆಹನಾಜ್ ಗಿಲ್ ರೈಸಿಂಗ್ ಸ್ಟಾರ್ ಆಫ್ ಬಾಲಿವುಡ್ ಪ್ರಶಸ್ತಿ ಪಡೆದರು. ತಮ್ಮ ಪ್ರಶಸ್ತಿಯನ್ನು ಸ್ವೀಕರಿಸಿದ ವೇಳೆ ಸಿದ್ಧಾರ್ಥ್ ಶುಕ್ಲಾರಿಗೆ ಗೌರವ ಸಲ್ಲಿಸಿದರು.
''ಈ ಪ್ರಶಸ್ತಿ ನನ್ನ ಪರಿಶ್ರಮಕ್ಕೆ ಸಿಕ್ಕ ಫಲ. ನಾನು ಓರ್ವ ವ್ಯಕ್ತಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸಿದ್ಧಾರ್ಥ್ ಶುಕ್ಲಾ, ನನ್ನ ಜೀವನದಲ್ಲಿ ನೀವು ಆಗಮಿಸಿದ್ದಕ್ಕೆ ಧನ್ಯವಾದ. ನಿಮ್ಮಿಂದ ನಾನು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ನಾನು ಇಂದು ಏನನ್ನು ಸಾಧಿಸಿದ್ದೇನೋ ಅದೆಲ್ಲವೂ ನಿಮ್ಮಿಂದಲೇ. ಇದು ನಿಮಗಾಗಿ ಸಿದ್ಧಾರ್ಥ್ ಶುಕ್ಲಾ" ಎಂದು ಶೆಹನಾಜ್ ತಿಳಿಸಿದರು.