ಮುಂಬೈ (ಮಹಾರಾಷ್ಟ್ರ): ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ಆರೋಪಿ ಕಿರುತೆರೆ ನಟ ಶೀಜಾನ್ ಖಾನ್‌ಗೆ ವಸಾಯಿ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದಿಂದ 1 ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಲಾಗಿದ್ದು, ಪಾಸ್‌ಪೋರ್ಟ್ ಸಲ್ಲಿಸುವಂತೆ ಸೂಚಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿದ್ದ ಹೆಸರು ಮಾಡಿದ್ದ ತುನಿಶಾ ಶರ್ಮಾ (20) 2022 ರ ಡಿಸೆಂಬರ್ 24 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲಿಬಾಬಾ- ದಸ್ತಾನ್- ಎ- ಕಾಬೂಲ್ ಎಂಬ ಟಿವಿ ಶೋನ ಸೆಟ್ನಲ್ಲಿ ತುನಿಶಾ ಶವವಾಗಿ ಪತ್ತೆಯಾಗಿದ್ದರು. ಸಹ ನಟರಾದ ಶೀಜಾನ್ ಖಾನ್ನೊಂದಿಗೆ ಸ್ನೇಹ ಮತ್ತು ಪ್ರೀತಿ ಹೊಂದಿದ್ದ ತುನಿಶಾ ಆತ್ಮಹತ್ಯೆಗೆ 15 ದಿನಗಳ ಮುನ್ನವಷ್ಟೇ ಬೇರ್ಪಟ್ಟಿದ್ದರು.
ಆತ್ಮಹತ್ಯೆ ಬಳಿಕ ತುನಿಶಾ ತಾಯಿ ಶೀಜಾನ್ ವಿರುದ್ಧ ದೂರು ದಾಖಲಿಸಿದ್ದರು. ಖಾನ್ ವಿರುದ್ಧ ವಾಲೀವ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 306 ರ ಅಡಿ ಕೇಸ್ ದಾಖಲಾಗಿತ್ತು. ಕೂಡಲೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅವರನ್ನು ಬಂಧಿಸಿ ವಸಾಯಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜೊತೆಗೆ ತುನಿಶಾಳ ತಾಯಿ ವನಿತಾ ಶರ್ಮಾ ಅವರು ಶೀಜಾನ್ ಖಾನ್ ಇಸ್ಲಾಂ ಧರ್ಮ ಸ್ವೀಕರಿಸಲು ಮತ್ತು ಹಿಜಾಬ್ ಧರಿಸುವಂತೆ ತಮ್ಮ ಮಗಳಿಗೆ ಒತ್ತಾಯಿಸಿರುವುದಾಗಿ ಆರೋಪಿಸಿದ್ದರು.
ಇದನ್ನೂ ಓದಿ:ಪಠಾಣ್ ನಟಿ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸುರಿಮಳೆ: ಕಾರಣವೇನು?
ಇದಕ್ಕೆ ವಿರುದ್ಧವಾಗಿ ಶೀಜಾನ್ ಖಾನ್ ಪರ ವಕೀಲ ಶೈಲೇಂದ್ರ ಮಿಶ್ರಾ ಕೂಡ ತುನೀಶಾ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆಕೆಯ ಚಿಕ್ಕಪ್ಪ ಸಂಜೀವ್ ಕೌಶಲ್ ಅವರ ವಿಷಯವಾಗಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಸಂಜೀವ್ ಕೌಶಲ್ ಮತ್ತು ತುನಿಶಾಳ ತಾಯಿ ಆಕೆಯ ಹಣಕಾಸಿನ ಮೇಲೆ ಹಿಡಿತ ಸಾಧಿಸುತ್ತಿದ್ದರು. ಅಲ್ಲದೇ ತುನಿಶಾಳ ತಾಯಿ ಆಕೆಯ ಮೊಬೈಲ್ ಫೋನ್ ಅನ್ನು ಒಡೆದು ಹಾಡಿದ್ದಲ್ಲದೇ ಕತ್ತು ಹಿಸುಕಲು ಪ್ರಯತ್ನಿಸಿರುವುದಾಗಿ ಆರೋಪಿಸಿದ್ದಾರೆ.
ತುನಿಶಾ ವೃತ್ತಿ ಜೀವನ ಹೀಗಿತ್ತು.. 2015ರಲ್ಲಿ ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್ ಧಾರಾವಾಹಿ ಮೂಲಕ ತುನಿಶಾ ಶರ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಅದಾದ ಬಳಿಕ ಚಕ್ರವರ್ತಿ ಅಶೋಕ್ ಸಾಮ್ರಾಟ್, ಇಷ್ಕ್ ಸುಭಾನ್ ಅಲ್ಲಾ, ಇಂಟರ್ನೆಟ್ ವಾಲಾ ಲವ್ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿದ್ದರು. ನಟಿ ಕತ್ರಿನಾ ಕೈಫ್ ಅಭಿಯನದ ಫಿತೂರ್ ಚಿತ್ರದ ಮೂಲಕ ಚಿತ್ರರಂಗಕ್ಕೂ ತುನಿಶಾ ಶರ್ಮಾ ಕಾಲಿಟ್ಟಿದ್ದರು. ಇದರಲ್ಲಿ ಬಾಲ ಫಿರ್ದೌಸ್ ಪಾತ್ರವನ್ನು ನಿರ್ವಹಿಸಿದ್ದರು.
ಅಲ್ಲದೇ, ಕತ್ರಿನಾ ನಟಿಸಿದ್ದ ಬಾರ್ ಬಾರ್ ದೇಖೋ ಚಿತ್ರದಲ್ಲೂ ತುನಿಶಾ ಶರ್ಮಾ ಬಣ್ಣ ಹಚ್ಚಿಸಿದ್ದರು. ಈ ಚಿತ್ರದಲ್ಲಿ ಯುವ ದಿಯಾ ಪಾತ್ರವನ್ನು ನಿರ್ವಹಿಸಿದ್ದರು. ಈ ಎರಡೂ ಚಿತ್ರಗಳಲ್ಲಿ ತುನಿಶಾ ಅವರು ಕತ್ರಿನಾ ಕೈಫ್ ಪಾತ್ರದ ಬಾಲ ನಟಿಯಾಗಿ ನಟಿಸಿದ್ದರು. ದಬಾಂಗ್ - 3 ಮುಂತಾದ ಚಿತ್ರಗಳಲ್ಲಿಯೂ ತುನಿಶಾ ಶರ್ಮಾ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:'ಇಷ್ಟು ದಿನ ನೀವೆಲ್ಲಿದ್ರಿ'.. ಬಾಲಿವುಡ್ ಕ್ಯಾಟ್ ಫೋಟೋಗೆ ಫ್ಯಾನ್ಸ್ ಪ್ರಶ್ನೆ?!