ಬಾಲಿವುಡ್ ಖ್ಯಾತ ಮತ್ತು ಹಿರಿಯ ನಟ ಸತೀಶ್ ಕೌಶಿಕ್ ಹೋಳಿ ಹಬ್ಬ ಸಂದರ್ಭ (ಮಾರ್ಚ್ 7) ಹೃದಯಾಘಾತದಿಂದ ನಿಧನರಾದರು. ಈ ಸುದ್ದಿ ಚಿತ್ರರಂಗ ಮತ್ತು ಅಭಿಮಾನಿಗಳ ಕಂಬನಿಗೆ ಕಾರಣವಾಗಿತ್ತು.
ಆ ದಿನಗಳಲ್ಲಿ ದಿ. ನಟ ಸತೀಶ್ ಕೌಶಿಕ್ ಸ್ನೇಹಿತರೊಂದಿಗೆ ಹೋಳಿ ಆಡಿದ್ದ ಸಂಭ್ರಮಿಸಿದ್ದರು. ಆದ್ರೆ ಅವರ ನಿರ್ಗಮನವು ಅವರ ಅಭಿಮಾನಿಗಳ ಹೋಳಿ ಹಬ್ಬವನ್ನು ಬಣ್ಣರಹಿತವಾಗಿಸಿತು. ಚಿತ್ರರಂಗದವರು, ಗಣ್ಯರು ಸೇರಿದಂತೆ ಅಭಿಮಾನಿಗಳು ನಟನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ನಟ ಸತೀಶ್ ಕೌಶಿಕ್ ಅವರ ನಿಧನಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಸಂತಾಪ ಸೂಚಿಸಿದ್ದರು. ಆ ಕಠಿಣ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಸತೀಶ್ ಕೌಶಿಕ್ ಅವರ ಕುಟುಂಬಕ್ಕೆ ಪತ್ರವನ್ನು ಕಳುಹಿಸಲಾಗಿತ್ತು. ಇದೀಗ ಸತೀಶ್ ಕೌಶಿಕ್ ಅವರ ಪತ್ನಿ ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಪಿಎಂಗೆ ಧನ್ಯವಾದ ತಿಳಿಸಿದ ಶಶಿ ಕೌಶಿಕ್: ''ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ, ಈ ದುಃಖದ ಸಮಯದಲ್ಲಿ ನಿಮ್ಮ ಸಂವೇದನಾಶೀಲ ಪತ್ರವು ನನಗೆ ಮತ್ತು ನಮ್ಮ ಕುಟುಂಬಕ್ಕೆ ಮುಲಾಮಿನಂತೆ ಕಾರ್ಯ ನಿರ್ವಹಿಸಿದೆ. ಆ ದುಃಖವನ್ನು ನಿಭಾಯಿಸಲು ನನಗೆ ಶಕ್ತಿ ತುಂಬಿದಿರಿ. ನಾನು, ಮಗಳು ವಂಶಿಕಾ, ನಮ್ಮ ಇಡೀ ಕುಟುಂಬದ ಪರವಾಗಿ ಮತ್ತು ಸತೀಶ್ ಅವರ ಎಲ್ಲಾ ಅಭಿಮಾನಿಗಳ ಪರವಾಗಿ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ ಮತ್ತು ನಿಮ್ಮ ಧೀರ್ಘ ಆರೋಗ್ಯಕರ ಜೀವನಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ, ವಂದನೆಗಳು, ಶಶಿ ಕೌಶಿಕ್'' ಎಂದು ತಿಳಿಸಿದ್ದಾರೆ,.
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಹಿರಿಯ ನಟ ಸತೀಶ್ ಕೌಶಿಕ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು. 'ಅತ್ಯುತ್ತಮ ನಟ ಸತೀಶ್ ಕೌಶಿಕ್ ಅವರ ನಿಧನದಿಂದ ಆಘಾತಕ್ಕೊಳಗಾಗಿದ್ದೇನೆ, ಅವರು ಅದ್ಭುತ ಕಲಾವಿದರಾಗಿದ್ದರು, ಅವರು ತಮ್ಮ ನಟನೆಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ನಿಮ್ಮ ಅದ್ಭುತ ಕೊಡುಗೆಗಳು, ನಿಮ್ಮ ಕೆಲಸವು ನಿಮ್ಮ ಪ್ರೀತಿಪಾತ್ರರ ಹೃದಯದಲ್ಲಿ ಉಳಿಯುತ್ತದೆ, ಕುಟುಂಬಕ್ಕೆ ನನ್ನ ಸಂತಾಪ, ಓಂ ಶಾಂತಿ' ಎಂದು ಪಿಎಂ ಮೋದಿ ಸಂಪಾಪ ಸೂಚಿಸಿದ್ದರು.