ವಿಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್. ಇವರ ಪತ್ನಿ ರಾಗಿಣಿ ಚಂದ್ರನ್ ಯೋಗ ಟ್ರೈನರ್ ಹಾಗು ಅದ್ಭುತ ಡ್ಯಾನ್ಸರ್ ಕೂಡಾ ಹೌದು. ಲಾ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಗಮನ ಸೆಳೆದ ರಾಗಿಣಿ ಚಂದ್ರನ್ ಈ ಬಾರಿ ಒಂದು ಚಾಲೆಂಜಿಂಗ್ ಪಾತ್ರದ ಮೂಲಕ ಸಿನಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಈ ಹಿಂದೆ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಇದೀಗ 'ಶಾನುಭೋಗರ ಮಗಳು' ಎಂಬ ಹೊಸ ಚಿತ್ರ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೋಡ್ಲು ರಾಮಕೃಷ್ಣ ಅವರು ಶಾನುಭೋಗರ ಮಗಳು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮಿ. ಡೂಪ್ಲಿಕೇಟ್ ಸಿನಿಮಾವನ್ನು ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದರು. ಅದರಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದರು. ಇದೀಗ ರಾಗಿಣಿ ನಾಯಕಿಯಾಗಿರುವ ಸಿನಿಮಾಗೆ ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡುತ್ತಿರುವುದು ವಿಶೇಷ.
ಭಾಗ್ಯ ಕೃಷ್ಣಮೂರ್ತಿ ಬರೆದಿರುವ ಕಾದಂಬರಿ ಆಧರಿಸಿ ಶಾನುಭೋಗರ ಮಗಳು ಸಿನಿಮಾ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಸಿನಿಮಾ ಒಳಗೊಂಡಿದೆ. ಕನ್ನಡದಲ್ಲಿ ಅತಿ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಮತ್ತೊಮ್ಮೆ ಕಾದಂಬರಿ ಆಧಾರಿತ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ಬ್ರಿಟಿಷರು, ಟಿಪ್ಪು ಸುಲ್ತಾನ್ ಹಾಗೂ ಮೈಸೂರಿನ ಮಹಾರಾಜರುಗಳೊಂದಿಗಿನ ಸನ್ನಿವೇಶಗಳು ಹೆಚ್ಚಿವೆ. ಶಾನುಭೋಗರ ಮಗಳ ಪಾತ್ರದಲ್ಲಿ ರಾಗಿಣಿ ಚಂದ್ರನ್ ಅಭಿಯಿಸುತ್ತಿದ್ದು, ಬ್ರಿಟಿಷರನ್ನು ಗುಂಡಿಟ್ಟು ಸಾಯಿಸುವ ದೃಶ್ಯವನ್ನು ಇತ್ತೀಚಿಗೆ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ಚಿತ್ರೀಕರಿಸಲಾಯಿತು.