ಮುಂಬೈ (ಮಹಾರಾಷ್ಟ್ರ): ಹಿಂದಿಯ ಜನಪ್ರಿಯ ರಿಯಾಲಿಟಿ ಶೋ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರೂಪಣೆಯ 'ಬಿಗ್ ಬಾಸ್ 16'ರ ಇತ್ತೀಚಿನ ಸಂಚಿಕೆಯಲ್ಲಿ, ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಸ್ಟಂಟ್ ಆಧಾರಿತ ರಿಯಾಲಿಟಿ ಶೋ ಖತ್ರೋನ್ ಕೆ ಖಿಲಾಡಿಗೆ ಶಾಲಿನ್ ಭಾನೋಟ್ (Shalin Bhanot) ಅವರಿಗೆ ಆಫರ್ ನೀಡಿದರು, ಆದ್ರೆ ಬಿಗ್ ಬಾಸ್ ಸ್ಪರ್ಧಿ ಶಾಲಿನ್ ಭಾನೋಟ್ ಆ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ತನಗೆ ವಿದ್ಯುತ್ ಮತ್ತು ಸರೀಸೃಪಗಳ ಭಯವಿದೆ. ಹಾಗಾಗಿ ಖತ್ರೋನ್ ಕೆ ಖಿಲಾಡಿ ಶೋನಲ್ಲಿ ಸಂಪೂರ್ಣವಾಗಿ ಭಾಗಿಯಾಗಲು ನನ್ನಿಂದ ಸಾಧ್ಯವಿಲ್ಲ. ಬಾಲಿವುಡ್ ಪ್ರಾಜೆಕ್ಟ್ ಪಡೆಯಲು ಈವರೆಗಿನ ಎಲ್ಲಾ ಟಾಸ್ಕ್‌ಗಳನ್ನು ಮಾಡಿದ್ದೇನೆಯೇ ಹೊರತು ರಿಯಾಲಿಟಿ ಶೋ ಆಫರ್ಗೆ ಅಲ್ಲ ಎಂದಿದ್ದಾರೆ.
'ಬಿಗ್ ಬಾಸ್ 16'ರ ಇತ್ತೀಚಿನ ಸಂಚಿಕೆಯಲ್ಲಿ ನಿರ್ದೇಶಕ, ನಿರೂಪಕ ರೋಹಿತ್ ಶೆಟ್ಟಿ ದೊಡ್ಮನೆ ಪ್ರವೇಶಿಸಿದರು. ಟಾಪ್ 5 ಸ್ಪರ್ಧಿಗಳಾದ ಪ್ರಿಯಾಂಕಾ ಚಾಹರ್ ಚೌಧರಿ, ಎಂಸಿ ಸ್ಟಾನ್, ಶಿವ ಠಾಕರೆ, ಅರ್ಚನಾ ಗೌತಮ್ ಮತ್ತು ಶಾಲಿನ್ ಭಾನೋಟ್ ಅವರಿಗೆ ಕಷ್ಟಕರವಾದ ಟಾಸ್ಕ್‌ಗಳನ್ನು ನೀಡಿದರು. ಬಿಗ್ ಬಾಸ್ 16 ರ ಫೈನಲಿಸ್ಟ್‌ಗಳು ತಮ್ಮ ಸಾಮರ್ಥ್ಯ ಸಾಬೀತು ಪಡಿಸಬೇಕಿತ್ತು. ನೀರಿನೊಳಗೆ ಉಸಿರನ್ನು ಹಿಡಿದಿಟ್ಟುಕೊಳ್ಳುವುದು, ಕರೆಂಟ್ ಶಾಕ್ನಿಂದ ತಪ್ಪಿಸಿಕೊಳ್ಳುವುದು, ಬೈಸಿಕಲ್‌ನಲ್ಲಿ ಸಾಹಸ ಪ್ರದರ್ಶನ ಹೀಗೆ ಸಾಹಸಮಯ ಟಾಸ್ಕ್ಗಳಲ್ಲಿ ಭಾಗಿ ಆದರು.
ಈ ಸಾಹಸಮಯ ಟಾಸ್ಕ್ಗಳಲ್ಲಿ ಬಿಗ್ ಬಾಸ್ ಸ್ಪರ್ಧಿ ಶಾಲಿನ್ ಭಾನೋಟ್ ಅದ್ಭುತ ಪ್ರದರ್ಶನ ನೀಡಿದರು. ಅವರ ಸಾಮರ್ಥ್ಯ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನ ಮುಟ್ಟಿತು. ಪರಿಣಾಮ, ರೋಹಿತ್ ಶೆಟ್ಟಿ ಅವರು ಶಾಲಿನ್ ಭಾನೋಟ್ ಅವರಿಗೆ ಖತ್ರೋನ್ ಕೆ ಖಿಲಾಡಿ ಸೀಸನ್ 13ರ ಭಾಗವಾಗಲು ದೊಡ್ಡ ಆಫರ್ ನೀಡಿದರು. ಆದ್ರೆ ಶಾಲಿನ್ ಭಾನೋಟ್ ಆ ಆಫರ್ ಅನ್ನು ತಿರಸ್ಕರಿಸಿದರು. ಸ್ಟಂಟ್ ಆಧಾರಿತ ರಿಯಾಲಿಟಿ ಶೋನಲ್ಲಿ ಆಡಿಶನ್ ಆದರೂ ನೀಡುವಂತೆ ರೋಹಿತ್ ಕೇಳಿಕೊಂಡರು. ಆದಾಗ್ಯೂ, ಶಾಲಿನ್ ಭಾನೋಟ್ ಅದನ್ನು ತಿರಸ್ಕರಿಸಿದರು. ರೋಹಿತ್ ಶೆಟ್ಟಿ ಬಗ್ಗೆ ಶಾಲಿನ್ ಭಾನೋಟ್ ಅವರ ಈ ವರ್ತನೆಯನ್ನು ಬಿಗ್ಬಾಸ್ ಮನೆಯವರು ಸಹಿಸಿಕೊಳ್ಳಲಿಲ್ಲ.