ಕರ್ನಾಟಕದ್ಯಾಂತ ಈಗ ಎಲ್ಲಿ ನೋಡಿದರು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇದೀಗ ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು "ಜಯಭೇರಿ ಕನ್ನಡ" ಎಂಬ ಹಾಡು ಅನಾವರಣಗೊಂಡಿದೆ. ಇದೇ ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಾಡು ಬಿಡುಗಡೆ ಮಾಡಿದ್ದರು.
ಈ ಹಾಡಿನ ಬಗ್ಗೆ ನಿರ್ಮಾಪಕ ಡಾ ಶೈಲೇಶ್ ಕುಮಾರ್ ಮಾಧ್ಯಮವರೊಂದಿಗೆ ಮಾತನಾಡಿ, ನಾನು ವೃತ್ತಿಯಲ್ಲಿ ವೈದ್ಯ. ಸಿನಿಮಾ ರಂಗದಲ್ಲಿ ನನಗೆ ಡಾ ರಾಜಕುಮಾರ್ ಅವರು ಪ್ರೇರಣೆ. ನಮ್ಮ ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಲಾಂಛನದಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದ "6ನೇ ಮೈಲಿ" ಚಿತ್ರ ನಿರ್ಮಾಣ ಮಾಡಿದ್ದೆ. ಈಗ "ತಲ್ವಾರ್ ಪೇಟೆ" ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ. ನನಗೆ ಈ ಸಮಾಜ ಸಾಕಷ್ಟು ಕೊಟ್ಟಿದೆ. ನಾನು ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ಹಾಗೂ ಕನ್ನಡದ ಮೇಲಿನ ಭಾಷಾಭಿಮಾನದಿಂದ "ಜಯಭೇರಿ ಕನ್ನಡ" ಎಂಬ ಕನ್ನಡದ ಹಿರಿಮೆ ಸಾರುವ ಹಾಡೊಂದನ್ನು ನಿರ್ಮಾಣ ಮಾಡಿದ್ದೇನೆ ಎಂದರು.
ಡಾ ಶಶಿಕಲಾ ಪುಟ್ಟಸ್ವಾಮಿ ಈ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಹೇಮಂತ್ ಕುಮಾರ್, ಅನಿರುದ್ದ್ ಶಾಸ್ತ್ರಿ , ಅನುರಾಧ ಭಟ್ ಹಾಡಿದ್ದಾರೆ. ಯಶಸ್ ಸೂರ್ಯ, ನಿಶ್ವಿಕಾ ನಾಯ್ಡು, ಕಿರಣ್ ರಾಜ್, ವೀಣಾ ಪೊನ್ನಪ್ಪ ಹಾಗೂ ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇವೆ. ಈ ಹಾಡನ್ನು ನಿರ್ಮಾಣ ಮಾಡಿ ಮಾನ್ಯ ಸಚಿವರಾದ ಶಿವರಾಜ್ ತಂಗಡಗಿ ಅವರ ಬಳಿ ಹೇಳಿದಾಗ, ಅವರು ಈ ಹಾಡನ್ನು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಕರ್ನಾಟಕ ಸರ್ಕಾರಕ್ಕೆ ಹಾಗೂ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.