ಬ್ಲಾಕ್ ಬಸ್ಟರ್ ಸಿನಿಮಾ 'ಪಠಾಣ್' ನಂತರ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ಬ್ಯಾಚುಲರ್ ಸಲ್ಮಾನ್ ಖಾನ್ ಕಾಂಬೋ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಶಾರುಖ್ ಖಾನ್ 'ಟೈಗರ್-3' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.
ಮುಂಬೈನ ಮಧ್ ದ್ವೀಪದಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಸಲ್ಮಾನ್ ಖಾನ್ ಅವರ 'ಟೈಗರ್ 3' ಚಿತ್ರದಲ್ಲಿ ಶಾರುಖ್ ಖಾನ್ ತಮ್ಮ ಅತಿಥಿ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಶಾರುಖ್ ಖಾನ್ ಕಳೆದ ಹಲವು ದಿನಗಳಿಂದ ಈ ಚಿತ್ರಕ್ಕಾಗಿ ಡೇಟ್ ಫೈನಲ್ ಮಾಡುವ ಯೋಚನೆಯಲ್ಲಿದ್ದರು. ಈಗಾಗಲೇ ಶೂಟಿಂಗ್ ಆರಂಭಗೊಂಡಿದ್ದು, ಸುಮಾರು ಒಂದು ವಾರದ ಶೆಡ್ಯೂಲ್ ಫಿಕ್ಸ್ ಆಗಿದೆ.
ವರದಿಗಳ ಪ್ರಕಾರ, ಚಲನಚಿತ್ರ ನಿರ್ಮಾಪಕರು ಮಧ್ ಐಸ್ಲ್ಯಾಂಡ್ನಲ್ಲಿ ಭಾರಿ ಭದ್ರತೆಯೊಂದಿಗೆ ಚಿತ್ರೀಕರಣ ನಡೆಸುತ್ತಿದ್ದಾರೆ. ಇಲ್ಲಿ 35 ಕೋಟಿ ರೂಪಾಯಿ ವೆಚ್ಚದ ಸೆಟ್ನಲ್ಲಿ ಆ್ಯಕ್ಷನ್ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಏಳು ದಿನಗಳಲ್ಲಿ ಈ ದೃಶ್ಯ ಪೂರ್ಣಗೊಳ್ಳಲಿದೆ. 35 ಕೋಟಿ ವೆಚ್ಚದ ಈ ದೃಶ್ಯವನ್ನು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಜೊತೆಯಾಗಿ ಚಿತ್ರೀಕರಿಸಬೇಕಿದೆ. ಕಳೆದ ಹಲವು ದಿನಗಳಿಂದ ಈ ಹೈ ಬಜೆಟ್ ದೃಶ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ.
ಆದಿತ್ಯ ಚೋಪ್ರಾ ನಿರ್ಮಾಣದಲ್ಲಿ 'ಟೈಗರ್-3' ನಿರ್ಮಾಣಗೊಳ್ಳುತ್ತಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಅಡಿ ರೆಡಿಯಾಗುತ್ತಿರುವ ಈ ಚಿತ್ರಕ್ಕೆ ಸಾಕಷ್ಟು ಸಮಯ, ಹಣ ಮೀಸಲಿಡಲಾಗಿದೆ. ಹಾಗಾಗಿ ಈ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ.