ಮುಂಬೈ:ವಿವಾದಗಳಿಂದಲೇ ಸುದ್ದಿ ಮಾಡಿದ್ದ "ಪಠಾಣ್" ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿದ್ದು, ಈವರೆಗೂ 591 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಬಾಲಿವುಡ್ ಇತಿಹಾಸದಲ್ಲೇ, ಮೊದಲ ವಾರದಲ್ಲಿ ಸಿನಿಮಾವೊಂದರ ಅತ್ಯಧಿಕ ಗಳಿಕೆ. ಪಠಾಣ್ ಖ್ಯಾತಿಗೆ ಶಾರುಖ್ ಖಾನ್ ಅತೀವ ಸಂತಸ ವ್ಯಕ್ತಪಡಿಸಿದ್ದು, "4 ವರ್ಷಗಳಲ್ಲಿ ಕಳೆದುಕೊಂಡಿದ್ದನ್ನು ನಾಲ್ಕೇ ದಿನದಲ್ಲಿ ಗಳಿಸಿಕೊಂಡೆ" ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
6 ದಿನ, 591 ಕೋಟಿ:ಬಾಲಿವುಡ್ ಬಾದ್ಶಾ ಎಂದೇ ಖ್ಯಾತಿ ಗಳಿಸಿರುವ ಶಾರುಖ್ ಖಾನ್ ಸ್ಪೈ ಥ್ರಿಲ್ಲರ್ ಕಥೆಯಾಧರಿತ "ಪಠಾಣ್" 6 ದಿನದಲ್ಲಿ ದಿನದಲ್ಲಿ 591 ಕೋಟಿ ರೂಪಾಯಿಗಳ ಗಳಿಕೆಯೊಂದಿಗೆ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಆರಂಭಿಕ ವಾರದಲ್ಲಿ ಅಧಿಕ ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆ ಬರೆಯಿತು. ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಚಿತ್ರವು ಆರು ದಿನಗಳಲ್ಲಿ ವಿಶ್ವದಾದ್ಯಂತ 591 ಕೋಟಿ ರೂಪಾಯಿ ಸಂಗ್ರಹಿಸಿದೆ.
ಶಾರರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಾಹಸಮಯ ಚಿತ್ರ ಪಠಾಣ್, ಭಾರತದಲ್ಲಿ 367 ಕೋಟಿ ರೂಪಾಯಿ ಸಂಗ್ರಹ ಆಗಿದ್ದರೆ, ವಿದೇಶಗಳಲ್ಲಿ 224 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಯಶ್ ರಾಜ್ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.
ದಿನನಿತ್ಯದ ಲೆಕ್ಕಾಚಾರ: ಸುಮಾರು 100 ದೇಶಗಳಲ್ಲಿ ತೆರೆ ಕಂಡಿರುವ ಪಠಾಣ್ ಸಿನಿಮಾ ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೊಟಿ ರೂ. + ವಿದೇಶಗಳಲ್ಲಿ 49 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೊಟಿ ರೂ. + ವಿದೇಶಗಳಲ್ಲಿ 30.70 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೊಟಿ ರೂ. + ವಿದೇಶಗಳಲ್ಲಿ 43 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ 116 ಕೋಟಿ (ಭಾರತದಲ್ಲಿ 64 ಕೊಟಿ ರೂ. + ವಿದೇಶಗಳಲ್ಲಿ 52 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಐದನೇ ದಿನ 112 ಕೋಟಿ (ಭಾರತದಲ್ಲಿ 70 ಕೊಟಿ ರೂ. + ವಿದೇಶಗಳಲ್ಲಿ 42 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಆರನೇ ದಿನ 41.5 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ.