ಮುಂಬೈ:ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ನಟರಿಗೆ ಈಗಾಗಲೇ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇದೀಗ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಕಾರಣ ಕಳೆದ ವಾರ ನಿರ್ಮಾಪಕ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿ ಎಂಬ ಸುದ್ದಿ ಹರಿದಾಡುತ್ತಿದೆ.
ಬಾಲಿವುಡ್ನಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಕೊರೊನಾಗೆ ತುತ್ತಾಗುತ್ತಿರುವುದು ಕಳವಳ ಉಂಟು ಮಾಡಿದೆ. ಸತತವಾಗಿ ಎಲ್ಲರಿಗೂ ಕೊರೊನಾ ಪಾಸಿಟಿವ್ ಬರುತ್ತಿರುವುದಕ್ಕೆ ಕರಣ್ ಜೋಹರ್ ನೀಡಿದ ಪಾರ್ಟಿಯೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಕರಣ್ ಜೋಹರ್ ಅವರ ಮನೆ ಕೋವಿಡ್ ಹಾಟ್ ಸ್ಪಾಟ್ ಆಗಿದೆ ಎಂದು ದೂಷಿಸಲಾಗಿದೆ.