ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಮುಂಬರುವ ಆ್ಯಕ್ಷನ್- ಥ್ರಿಲ್ಲರ್ ಚಿತ್ರ 'ಬ್ಲಡಿ ಡ್ಯಾಡಿ' ನೇರ ಓಟಿಟಿ ಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ನಿನ್ನೆ (ಬುಧವಾರ) ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜಿಯೋ ಸ್ಟುಡಿಯೋಸ್ ತಮ್ಮ ಮುಂಬರುವ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಬಗ್ಗೆ ತಿಳಿಸಿತು. ಕಾರ್ಯಕ್ರಮದಲ್ಲಿ 'ಬ್ಲಡಿ ಡ್ಯಾಡಿ' ತಯಾರಕರು ತಮ್ಮ ಚಿತ್ರದ ಮೊದಲ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಚಿತ್ರದಲ್ಲಿ ಜರ್ಸಿ ನಟನನ್ನು ಕೊಲೆಗಾರನ ಅವತಾರದಲ್ಲಿ ತೋರಿಸಲಾಗಿದೆ.
ಈ ವೇಳೆ ಸಿನಿಮಾದ ಕುರಿತು ಮಾತನಾಡಿದ ಆರ್ಐಎಲ್ ಮೀಡಿಯಾ ಮತ್ತು ಕಂಟೆಂಟ್ ಬ್ಯುಸಿನೆಸ್ ಅಧ್ಯಕ್ಷೆ ಜ್ಯೋತಿ ದೇಶ್ಪಾಂಡೆ, "ನಾವು ಅತೀ ದೊಡ್ಡ ಸಿನಿಮಾವನ್ನು ಮಾಡುತ್ತಿದ್ದೇವೆ. ಅದು ಕೂಡ ಒಬ್ಬ ಸ್ಟಾರ್ ನಟನ ಜೊತೆ, ಸ್ಟಾರ್ ನಿರ್ದೇಶನ ಜೊತೆ. ಈ ಸಿನಿಮಾಗಾಗಿ ನಾವು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ ಮತ್ತು ಚಿತ್ರವನ್ನು ನಾವು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದರು. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದಲ್ಲಿ ಸ್ಟಾರ್ ನಟರಾದ ಶಾಹಿದ್ ಕಪೂರ್, ಸಂಜಯ್ ಕಪೂರ್ ಮತ್ತು ರೋನಿತ್ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಳಿಕ ನಟ ಶಾಹಿದ್ ಕಪೂರ್ ಅವರು ಟೈಗರ್ ಜಿಂದಾ ಹೈ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. "ಇದು ತುಂಬಾ ಮಜವಾಗಿತ್ತು. ನಾನು ಆಕ್ಷನ್ ಫಿಲ್ಮ್ ಮಾಡಲು ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದೇನೆ ಮತ್ತು ಅಲಿಯೊಂದಿಗೆ ಕೆಲಸ ಮಾಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ. ಅವರು ಎಲ್ಲವನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸಿನಿಮಾವು ಓಟಿಟಿಯಲ್ಲಿ ಖಂಡಿತವಾಗಿಯೂ ಅಬ್ಬರಿಸಲಿದೆ" ಎಂದರು. ನಂತರ ಅವರ ಮೊದಲಿನ ನೃತ್ಯದ ಅನುಭವವು ಆಕ್ಷನ್ ಕೊರಿಯೋಗ್ರಫಿಯನ್ನು ವೇಗವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಬಹಿರಂಗಪಡಿಸಿದರು.