ಹೈದರಾಬಾದ್: ದಿನೇಶ್ ವಿಜನ್ ಅವರ ಮ್ಯಾಡ್ಡೊಕ್ ಸ್ಟುಡಿಯೋದಲ್ಲಿ ನಿರ್ಮಾಣವಾಗುತ್ತಿರುವ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿನ ನಟ ಶಾಹೀದ್ ಕಪೂರ್ ಮತ್ತು ಕೃತಿ ಸನೋನ್ ಮಿಂಚಲು ತಯಾರಾಗಿದ್ದಾರೆ. ಯಂತ್ರ ಮತ್ತು ಮಾನವನ ನಡುವಿನ ವಿಶಿಷ್ಟ ಪ್ರೀತಿಯ ಕಥಾ ಹಂದರವನ್ನು ಈ ಚಿತ್ರ ಕಟ್ಟಿಕೊಡಲಿದೆ. ಚಿತ್ರದಲ್ಲಿ ನಟ ಶಾಹೀದ್ ವಿಜ್ಞಾನಿಯಾಗಿ ಕಂಡಿದ್ದು, ತಾನೇ ತಯಾರಿಸಿದ ರೋಬೋಟ್ ಜೊತೆಗೆ ಪ್ರೇಮಕ್ಕೆ ಬೀಳುವ ಕಥೆಯನ್ನು ಇದು ಹೊಂದಿದೆ. ಈ ಚಿತ್ರವೂ ಅಂದುಕೊಂಡಂತೆ ಇದೇ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ 8ರಂದು ತೆರೆಗೆ ಅಪ್ಪಳಿಸಬೇಕಿತ್ತು. ಇದೀಗ ಚಿತ್ರ ಬಿಡುಗಡೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ರೋಮ್ಯಾಂಟಿಕ್ ಡ್ರಾಮ ಜೊತೆಗೆ ಅಸಾಧ್ಯ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಪ್ರೇಮಿಗಳ ದಿನದಂದು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಅಂದರೆ 2024ರ ಪ್ರೇಮಿಗಳ ವಾರಾಂತ್ಯದಲ್ಲಿ ಈ ಚಿತ್ರ ತೆರೆ ಕಾಣಲಿದೆ. ಈ ಚಿತ್ರ ಕೂಡ ಪ್ರೇಮಕಥೆ ಹೊಂದಿದ್ದು, ಪ್ರೇಮಿಗಳ ದಿನದಂದು ಬಿಡುಗಡೆಯಾದಲ್ಲಿ ಯುವ ಅಭಿಮಾನಿಗಳನ್ನು ಸೆಳೆಯಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರ.
ಅಮಿತ್ ಜೋಶಿ ಮತ್ತು ಅರಾಧನಾ ಸಹ್ ನಿರ್ದೇಶದನ ಈ ಚಿತ್ರದಲ್ಲಿ ಹಿರಿಯ ನಟ ಧರ್ಮೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಶಾಹೀದ್ ಮತ್ತು ಕೃತಿ ಸನೋನ್ ಒಟ್ಟಿಗೆ ನಟಿಸುತ್ತಿದ್ದು, ಈ ಜೋಡಿ ಕೆಮಿಸ್ಟ್ರಿ ಹೇಗಿರಲಿದೆ ಎಂಬ ಕುತೂಹಲ ಕೂಡ ಇದೆ. ಇತ್ತೀಚೆಗಷ್ಟೇ ನಟ ಶಾಹಿದ್ ಆ್ಯಕ್ಷನ್ ಥ್ರಿಲ್ಲರ್ 'ಬ್ಲಡಿ ಡ್ಯಾಡಿ' ಚಿತ್ರದಲ್ಲಿ ನಟಿಸಿದ್ದರು. ಆಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಜೀಯೊ ಸಿನಿಮಾ ಫ್ಲಾಟ್ಫಾರ್ಮ್ನಲ್ಲಿ ಪ್ರಸಾರ ಕಂಡಿತ್ತು.