ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಸಾಕಷ್ಟು ವಿವಾದಗಳ ನಂತರ ಬಾಂಗ್ಲಾದೇಶದ ಸೆನ್ಸಾರ್ ಮಂಡಳಿಯಿಂದ ಯಶಸ್ವಿಯಾಗಿ ಕ್ಲಿಯರೆನ್ಸ್ ಪಡೆದುಕೊಂಡಿದೆ. ಈ ಮೂಲಕ ದೇಶದ ಚಿತ್ರಮಂದಿರಗಳಲ್ಲಿ ಜವಾನ್ ಬಿಡುಗಡೆಗೆ ಅನುಮತಿ ದೊರೆತಿದೆ. ವಿಶ್ವದಾದ್ಯಂತ ಚಿತ್ರವು ನಿನ್ನೆ, ಸೆಪ್ಟಂಬರ್ 7ರಂದು ಬಿಡುಗಡೆಯಾಗಿದೆ. ಭಾರತದಲ್ಲಿ ತೆರೆಕಂಡ ದಿನವೇ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ.
ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಜವಾನ್ ಸಿನಿಮಾವು ಸೆಪ್ಟಂಬರ್ 7ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಬಳಿಕ ರಾತ್ರಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಇದಕ್ಕೂ ಮೊದಲು ಸಲ್ಮಾನ್ ಖಾನ್ ಅವರ 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಸಿನಿಮಾವು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿತ್ತು. ಆದರೆ, ಅದು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಅದಕ್ಕೂ ಮುನ್ನ 'ಪಠಾಣ್' ಸಿನಿಮಾವು ಬಾಂಗ್ಲಾ ಜನರಿಂದ ಭಾರೀ ಉತ್ಸಾಹ ಮತ್ತು ಪ್ರತಿಕ್ರಿಯೆಯನ್ನು ಗಳಿಸಿತ್ತು.
ಆದರೆ ವಿಶೇಷವಾಗಿ, ವಿದೇಶಿ ಸಿನಿಮಾವು ಮೊದಲ ಪ್ರದರ್ಶನ ಕಂಡ ಬಳಿಕ ಕೆಲವು ದಿನಗಳ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗುತ್ತದೆ. ಆದರೆ ಈ ರೂಢಿಯನ್ನು ಜವಾನ್ ಪುಡಿ ಮಾಡಿದೆ. ಜವಾನ್ ಸಿನಿಮಾ ಭಾರತದಲ್ಲಿ ತೆರೆ ಕಂಡ ದಿನವೇ ಬಾಂಗ್ಲಾದಲ್ಲೂ ಪ್ರಥಮ ಪ್ರದರ್ಶನ ಕಂಡಿದೆ. ಇದು ಶಾರುಖ್ ಖಾನ್ಗೆ ಮತ್ತೊಂದು ಯಶಸ್ಸನ್ನು ತಂದುಕೊಟ್ಟಿದೆ. ಬಾಂಗ್ಲಾದೇಶದಲ್ಲಿರುವ ಬಾದ್ ಶಾ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ:Jawan review: 'ಜವಾನ್'ಗೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್.. ಪ್ರೇಕ್ಷಕರಿಂದ ಶಾರುಖ್ ಸಿನಿಮಾಗೆ ಸಿಕ್ತು ಫುಲ್ ಮಾರ್ಕ್ಸ್
ಜವಾನ್ ಸಿನಿಮಾವನ್ನು ಬಾಂಗ್ಲಾದೇಶದಲ್ಲಿ ಅದು ಕೂಡ ಮೊದಲ ದಿನವೇ ಬಿಡುಗಡೆ ಮಾಡಲು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಏಕೆಂದರೆ ಇಂದಿನಿಂದ ಅಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗಿದೆ. ಹೀಗಿರುವಾಗ ಅಲ್ಲಿನ ನಿರ್ಮಾಣ ಸಂಸ್ಥೆ ಮತ್ತು ನಟರಿಗೆ ಕಲೆಕ್ಷನ್ ವಿಚಾರದಲ್ಲಿ ತೊಡಕಾದಿತು ಎಂಬ ಕಾರಣಕ್ಕೆ ಜವಾನ್ ಬಿಡುಗಡೆಗೆ ವಿರೋಧ ಕೇಳಿಬಂದಿತ್ತು. ಬಾಂಗ್ಲಾದೇಶ ಚಲನಚಿತ್ರ ನಿರ್ಮಾಪಕರ ಸಂಘದ ಅಲಿಖಿತ ನಿಯಮಗಳ ಪ್ರಕಾರ, ಬಾಂಗ್ಲಾದಲ್ಲಿ ಒಂದು ವಾರದಲ್ಲಿ ಎರಡಕ್ಕಿಂತ ಹೆಚ್ಚು ಚಿತ್ರಗಳನ್ನು ಬಿಡುಗಡೆ ಮಾಡುವಂತಿಲ್ಲ.
ಎರಡು ಬಾಂಗ್ಲಾದೇಶ ಸಿನಿಮಾಗಳಾದ ದೆಲ್ವಾರ್ ಜಹಾನು ಜಾಂತು ನಿರ್ದೇಶನದ ಸುಜನ್ ಮಾಝಿ ಮತ್ತು ಮುಶ್ಪಿಕರ್ ರೆಹಮಾನ್ ಗುಲ್ಜಾರ್ ನಿರ್ದೇಶನದ ದುಃಶಶಿ ಖೋಕಾ ಸಿನಿಮಾ ಸೆಪ್ಟಂಬರ್ 8 (ಇಂದು) ಬಿಡುಗಡೆಯಾಗಿದೆ. ಹೀಗಿರುವಾಗ ಈ ಎರಡು ಸ್ಥಳೀಯ ಚಿತ್ರಗಳನ್ನು ಈಗಾಗಲೇ ನಿಗದಿಪಡಿಸಲಾಗಿದ್ದು, ಮುಂಬರುವ ವಾರದಲ್ಲಿ ಯಾವುದೇ ಹೆಚ್ಚುವರಿ ಚಿತ್ರ ಬಿಡುಗಡೆಗೆ ಅವಕಾಶವಿರುವುದಿಲ್ಲ ಎಂದು ದೆಲ್ವಾರ್ ಜಹಾನು ಪ್ರತಿಪಾದಿಸಿದ್ದರು.
ಈ ಮಧ್ಯೆ ತಮಿಳು ನಿರ್ದೇಶಕ ಅಟ್ಲೀ ಅವರ ಜವಾನ್ ಬಾಂಗ್ಲಾದೇಶದಲ್ಲಿ ತೆರೆಕಂಡಿದ್ದು, ಶಾರುಖ್ ಅಭಿಮಾನಿಗಳ ಸಂಭ್ರಮಾಚರಣೆಗೆ ಕಾರಣವಾಗಿತ್ತು. ಈ ಆ್ಯಕ್ಷನ್ ಪ್ಯಾಕ್ಡ್ ಎಂಟರ್ಟೈನ್ಮೆಂಟ್ ಸಿನಿಮಾ ಭಾರತ ಮಾತ್ರವಲ್ಲದೇ ಯುನೈಟೆಡ್ ಸ್ಟೇಟ್ಸ್ ಮತ್ತು ದುಬೈನಲ್ಲೂ ಪ್ರದರ್ಶನ ಕಾಣುತ್ತಿದೆ. ಬಾದ್ ಶಾ ಅಭಿಮಾನಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಹಿಂದಿ ಚಿತ್ರರಂಗದ ಈವರೆಗಿನ ಬಾಕ್ಸ್ ಆಫೀಸ್ ದಾಖಲೆ ಮುರಿದ 'ಜವಾನ್'!