ಭಾರತವು 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಎರಡು ಗೆಲುವಿನೊಂದಿಗೆ ಇತಿಹಾಸ ಸೃಷ್ಟಿಸುತ್ತಿದ್ದಂತೆ ಎಲ್ಲೆಡೆಯಿಂದ ಹರ್ಷೋದ್ಘಾರ ಮೊಳಗಿದವು. ಭಾರತದ ಕೀರ್ತಿ ಹೆಚ್ಚಿಸಿದ ಆರ್‌ಆರ್‌ಆರ್ ಚಿತ್ರತಂಡ, ನಟರಿಗೆ ಅಭಿನಂದನಾ ಸಂದೇಶಗಳು ಹರಿದುಬಂದವು. ಸಾಮಾಜಿಕ ಮಾಧ್ಯಮದಲ್ಲಿ ಪ್ರತೀ ಕ್ಷೇತ್ರಗಳ ಪ್ರತಿಭೆಗಳು ಸೇರಿದಂತೆ ಅಭಿಮಾನಿಗಳು ಆಸ್ಕರ್ 2023 ವಿಜೇತರಿಗೆ ಪ್ರೀತಿಯ ಮಳೆ ಸುರಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಲಕ್ಷಾಂತರ ಭಾರತೀಯರೊಂದಿಗೆ ಸೇರಿಕೊಂಡು ನಾಟು ನಾಟು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಸಾಧನೆಯನ್ನು ಆಚರಿಸಿದರು.
ಶಾರುಖ್ ಖಾನ್ ಟ್ವೀಟ್: ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ಮಾಪಕಿ ಗುನೀತ್ ಮೊಂಗಾ ಅವರು ನಟ ಶಾರುಖ್ ಖಾನ್ ಅವರ ಅಪ್ಪುಗೆಗಾಗಿ ಕಾಯುತ್ತಿದ್ದಾರೆ. ಟ್ವಿಟರ್‌ನಲ್ಲಿ ಆಸ್ಕರ್ ವಿಜೇತರಿಗೆ ಎಸ್‌ಆರ್‌ಕೆ ಅವರು ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ. ಎರಡೂ ಆಸ್ಕರ್ ಪ್ರಶಸ್ತಿಗಳು ನಿಜವಾಗಿಯೂ ಸ್ಫೂರ್ತಿದಾಯಕವಾಗಿವೆ ಎಂದು ಪ್ರಶಂಸೆ ಮಾಡಿದ್ದಾರೆ. ಗುನೀತ್ ಮೊಂಗಾ ಮತ್ತು ಆರ್‌ಆರ್‌ಆರ್ ತಂಡಕ್ಕೆ ''ವರ್ಚುವಲ್ ಬಿಗ್ ಹಗ್" ಅನ್ನು ಪಠಾಣ್ ಹೀರೋ ಕಳುಹಿಸಿದ್ದಾರೆ. ಎಸ್‌ಆರ್‌ಕೆ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಆಸ್ಕರ್ ಪ್ರಶಸ್ತಿ ವಿಜೇತೆ ಗುನೀತ್ ಮೊಂಗಾ, ನಿಜವಾಗಿಯೂ ನಿಮ್ಮಿಂದ ಸ್ಫೂರ್ತಿ ಪಡೆಯುತ್ತೇವೆ. ಶೀಘ್ರದಲ್ಲೇ ನಿಮ್ಮ ನಿಜವಾದ ಅಪ್ಪುಗೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಇದ್ದೇನೆ ಎಂದು ಹೇಳಿದರು.
ರಾಜಮೌಳಿ ಪ್ರತಿಕ್ರಿಯೆ: ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಆರ್‌ಆರ್‌ಆರ್ ತಂಡವನ್ನು ಕೂಡ ಎಸ್‌ಆರ್‌ಕೆ ಶ್ಲಾಘಿಸಿದರು. ಸಂಗೀತ ಸಂಯೋಜಕ ಎಂಎಂ ಕೀರವಾಣಿ, ಗೀತರಚನೆಕಾರ ಚಂದ್ರಬೋಸ್, ನಿರ್ದೇಶಕ ರಾಜಮೌಳಿ ಮತ್ತು ಆರ್‌ಆರ್‌ಆರ್ ಪ್ರಮುಖ ನಟರಾದ ರಾಮ್ಚರಣ್, ಜೂನಿಯರ್ ಎನ್‌ಟಿಆರ್ ಅವರಿಗೆ ಅಭಿನಂದನೆ ತಿಳಿಸಿದರು. ಟ್ವಿಟರ್‌ನಲ್ಲಿ ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ತಕ್ಷಣವೇ ಪ್ರತಿಕ್ರಿಯಿಸಿ ಸೂಪರ್‌ಸ್ಟಾರ್‌ಗಳಿಗೆ ಧನ್ಯವಾದ ಅರ್ಪಿಸಿದರು.