ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮಿಳು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಅಟ್ಲಿ ಅವರೊಂದಿಗೆ ಮುಂದಿನ ಸಿನಿಮಾ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ಜವಾನ್ ಎಂದು ಟೈಟಲ್ ಇಡಲಾಗಿರುವ ಈ ಚಿತ್ರದಲ್ಲಿ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜವಾನ್ ಚಿತ್ರತಂಡ ಇತ್ತೀಚೆಗೆ ಚೆನ್ನೈನಲ್ಲಿ ನಿಗದಿ ಪಡಿಸಲಾಗಿದ್ದ ಶೂಟಿಂಗ್ ಮುಗಿಸಿದೆ. ಈ ಸಮಯದಲ್ಲಿ ಬಾಲಿವುಡ್ನ ಸೂಪರ್ ಸ್ಟಾರ್ಗೆ ತಮಿಳು ಚಿತ್ರರಂಗದ ರಜನಿಕಾಂತ್, ವಿಜಯ್ ಸೇತುಪತಿ ಮತ್ತು ವಿಜಯ್ ಸಾಥ್ ನೀಡಿದ್ದಾರೆ.
ಸೂಪರ್‌ಸ್ಟಾರ್ ಎಸ್‌ಆರ್‌ಕೆ ಮತ್ತು ಅಟ್ಲಿ ತಂಡ ಚೆನ್ನೈನಲ್ಲಿ ಜವಾನ್ ಶೂಟಿಂಗ್ ಮುಗಿಸಿದ್ದು, ಎಸ್‌ಆರ್‌ಕೆ ಚೆನ್ನೈನಲ್ಲಿ ತಮ್ಮ 30 ದಿನಗಳು ಹೇಗಿದ್ದವು ಎಂಬುದನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ''ಅದ್ಭುತ ದಿನಗಳು, ನಯನ ತಾರಾ ಜೊತೆ ಸಿನಿಮಾ ನೋಡಿದ್ದು, ವಿಜಯ್ ಸೇತುಪತಿ ಜೊತೆಗಿನ ಚರ್ಚೆ, ವಿಜಯ್ ಊಟ ಕೊಟ್ಟಿದ್ದು ಎಲ್ಲವೂ ಸುಂದರ ಕ್ಷಣಗಳು ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಜವಾನ್ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿ ಕೃಷ್ಣ ಪ್ರಿಯಾ ಅವರ ಆತಿಥ್ಯಕ್ಕಾಗಿ ಧನ್ಯವಾದ ಹೇಳಿದ್ದಾರೆ. ಚಿಕನ್ 65 ಮಾಡೋದನ್ನು ಪ್ರಿಯಾ ಅವರಿಂದ ಕಲಿಯಬೇಕಾಗಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.