ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜವಾನ್ ಚಿತ್ರವನ್ನು ಶಾರುಖ್ ಖಾನ್ರವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಿಸುತ್ತಿದೆ. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.
ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಬ್ಲಾಕ್ ಬಸ್ಟರ್ ಎಂದೆನಿಸಿಕೊಂಡಿತ್ತು. ಈಗ ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿವೆ. ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ.
ಜವಾನ್ ಚಿತ್ರದ ಓಟಿಟಿ, ಸ್ಯಾಟಲೈಟ್ ಮತ್ತು ಸಂಗೀತ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿದ್ದು, 250 ಕೋಟಿ ರೂಪಾಯಿಗೆ ಎಲ್ಲ ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಇದೆ. ಆದರೆ ಚಿತ್ರತಂಡದವರು ಮಾತ್ರ ಇನ್ನೂ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿವೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೀಗ ಜವಾನ್ ತೆರೆಗೆ ಬರಲು ಸಿದ್ಧವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಚಿತ್ರವು ಜೂನ್ 2 ರಂದು ಚಿತ್ರಮಂದಿರಗಳಿಗೆ ಬರಲಿದೆ ಎಂದು ನಿರ್ಮಾಪಕರು ಘೋಷಿಸಿದ್ದರು. ಆದರೆ ಚಿತ್ರ ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗೆ ಮತ್ತೆ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.