ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಡಂಕಿ' ಇದೇ ಡಿಸೆಂಬರ್ 21ರಂದು ತೆರೆ ಕಾಣಲಿದೆ. 2023ರಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಎಸ್ಆರ್ಕೆ ತಮ್ಮ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಡಂಕಿ ಮೂಲಕ ಮತ್ತೊಂದು ಹಿಟ್ ಪಡೆಯುವುದರ ಜೊತೆಗೆ ಹೊಸ ದಾಖಲೆ ನಿರ್ಮಿಸಲು ಅವರು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರೇಮಿಗಳ ಉತ್ಸಾಹ ಹೆಚ್ಚಿಸಿದೆ. ಇದೀಗ ಬಿಡುಗಡೆಗೆ ಮೂರು ದಿನಗಳಿರುವಾಗಲೇ ಚಿತ್ರದ ಮತ್ತೊಂದು ಹಾಡು ಅನಾವರಣಗೊಂಡಿದೆ.
ದಿಲ್ಜಿತ್ ದೋಸಾಂಜ್ ಹಾಡಿರುವ 'ಬಂದಾ' ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಶಾರುಖ್ ಖಾನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಡಂಕಿ ಡ್ರಾಪ್ 6 ಎಂಬ ಶೀರ್ಷಿಕೆಯೊಂದಿಗೆ 'ಬಂದಾ' ಹಾಡನ್ನು ಅನಾವರಣಗೊಳಿಸಿದ್ದಾರೆ. ಕುಮಾರ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ದಿಲ್ಜಿತ್ ದೋಸಾಂಜ್ ಕಂಠ ನೀಡಿದ್ದಾರೆ. ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಈ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ಹಾಡು ಬಿಡುಗಡೆಯ ಕುರಿತು ಅಪ್ಡೇಟ್ ನೀಡಲು ಶಾರುಖ್ ಖಾನ್ ಇನ್ಸ್ಟಾಗ್ರಾಮ್ ವೇದಿಕೆ ಬಳಸಿಕೊಂಡರು. "ತುಮ್ ಜೋ ಮಾಂಗ್ ಲೋಗೆ ದಿಲ್ ತೋ ಯೇ ಜಾನ್ ದೇಗಾ ಬಂದಾ....ವಾದೋಂ ಕಾ ಇರಾದೋಂ ಕಾ ಔರ್ ಅಪ್ನೆ ಯಾರೋನ್ ಕಾ ಯಾರ್.. ಹಾಡನ್ನು ಎಲ್ಲರೂ ಪ್ರೀತಿಸುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು ಮತ್ತು ಲವ್ ಯು ಪಾಜಿ. #DunkiDrop6 - #Banda ಹಾಡು. ಡಂಕಿ ಸಿನಿಮಾ 2023ರ ಡಿಸೆಂಬರ್ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.